Monday, November 10, 2025

ಪ್ರೀತಿಸಿ ಮದುವೆಯಾದವನಿಂದಲೇ ಕ್ರೌರ್ಯ: 6 ತಿಂಗಳ ಭ್ರೂಣ ಹೊಟ್ಟೆಯಲ್ಲೇ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಮೇಲೆ ಆಕೆಯ ಪತಿಯು ಮನಸೋ ಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ, ಆರು ತಿಂಗಳ ಭ್ರೂಣವು ಗರ್ಭದಲ್ಲೇ ಅಸುನೀಗಿರುವ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ. ಪತ್ನಿ ಗರ್ಭಿಣಿ ಎಂಬ ಕನಿಷ್ಠ ಮಾನವೀಯತೆಯೂ ಇಲ್ಲದೆ ಪತಿ ಅಟ್ಟಹಾಸ ಮೆರೆದಿದ್ದು, ಹಲ್ಲೆಯಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓಣಿಕೇರಿಯ ನಿವಾಸಿ ಅಮೀರಬಿ ಮನಿಯಾರ್, ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದ ಅಹ್ಮದರಾಜ್​ ಎಂಬ ಯುವಕನನ್ನು ಪ್ರೀತಿಸಿದ್ದಳು. ಈ ಪ್ರೀತಿ ದೈಹಿಕ ಸಂಪರ್ಕದವರೆಗೂ ಬೆಳೆದು ಅಮೀರಬಿ ಗರ್ಭಿಣಿಯಾಗಿದ್ದಳು. ಬಳಿಕ, ಕುಟುಂಬದ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಇಬ್ಬರ ಮದುವೆಯನ್ನು ನೆರವೇರಿಸಲಾಗಿತ್ತು.

ಆದರೆ, ಮದುವೆಯ ನಂತರ ಅಹ್ಮದರಾಜ್‌ನ ವರ್ತನೆ ಸಂಪೂರ್ಣ ಬದಲಾಗಿದೆ. ಗರ್ಭಿಣಿ ಪತ್ನಿಗೂ ಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ಅದರಲ್ಲೂ ಇತ್ತೀಚೆಗೆ ಲಾಠಿ ಮತ್ತು ಕೊಡಲಿಯಿಂದ ಆಮೀರಬಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆ ಅಮೀರಬಿ ಹೇಳಿಕೆ:

“ನನ್ನ ಹೊಟ್ಟೆಯಲ್ಲಿದ್ದ ಭ್ರೂಣದ ಸಾವಿಗೆ ನನ್ನ ಗಂಡ ಮತ್ತು ಆತನ ಮನೆಯವರೇ ಕಾರಣ. ಪ್ರತಿನಿತ್ಯ ನನ್ನ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. ಯಾರಿಗೂ ಹೇಳದಂತೆ ಬೆದರಿಕೆಯನ್ನೂ ಹಾಕಿದ್ದರು. ಆ ಭಯದಿಂದಲೇ ಇಂದು ನಾನು ಈ ಸ್ಥಿತಿಗೆ ಬರಬೇಕಾಯ್ತು. ನಾನು ಆರು ತಿಂಗಳ ಗರ್ಭಿಣಿ ಅಂತಲೂ ನೋಡದೆ ಹಲ್ಲೆ ಮಾಡಿದ್ದಾರೆ.”

ತಮ್ಮ ಮಗಳ ಮೇಲೆ ಅಮಾನವೀಯ ಹಲ್ಲೆ ನಡೆಸಿ, ಭ್ರೂಣವನ್ನು ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅಮೀರಬಿ ಪೋಷಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!