ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಸೋಲಿಗೆ ಕಾರಣವಾದ ಆಂತರಿಕ ದ್ರೋಹ ಹಾಗೂ ಕ್ರಾಸ್ ವೋಟಿಂಗ್ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದೆ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ರಚನೆಯಾಗಿದ್ದ ಸತ್ಯಶೋಧನಾ ಸಮಿತಿಯ ಸಂಚಾಲಕ, ಹಿರಿಯ ನಾಯಕ ಸಿ.ಟಿ. ರವಿ ಇಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ರಾಜ್ಯ ಕಚೇರಿ ‘ಜಗನ್ನಾಥ ಭವನ’ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಆಂತರಿಕ ತನಿಖಾ ವರದಿಯನ್ನು ಹಸ್ತಾಂತರಿಸಿದ್ದಾರೆ.
ರಹಸ್ಯ ಮಾಹಿತಿ ಸಂಗ್ರಹ:
ಸಿ.ಟಿ. ರವಿ ನೇತೃತ್ವದ ಸಮಿತಿಯು ಕಳೆದ ಕೆಲವು ದಿನಗಳಿಂದ ಅಡ್ಡಮತದಾನ ನಡೆದ ಕ್ಷೇತ್ರಗಳು, ಶಾಸಕರ ಇತ್ತೀಚಿನ ರಾಜಕೀಯ ನಡೆ ಹಾಗೂ ಮತದಾನದ ದಿನದ ರಹಸ್ಯ ಲೆಕ್ಕಾಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ವರದಿಯನ್ನು ಸಿದ್ಧಪಡಿಸಿದೆ. ಬಿಜೆಪಿಯಿಂದ ಅಡ್ಡಮತದಾನ ಮಾಡಿದ 3 ಶಾಸಕರು ಹಾಗೂ ಮೈತ್ರಿ ಪಕ್ಷ ಜೆಡಿಎಸ್‌ನಿಂದ ಉಲ್ಟಾ ಹೊಡೆದ 9 ಶಾಸಕರ ಬಗ್ಗೆ ಸಮಿತಿಯು ಸ್ಥಳೀಯ ನಾಯಕರಿಂದ ಮತ್ತು ಆಪ್ತ ವಲಯದಿಂದ ಸಂಗ್ರಹಿಸಿದ ಸಾಕ್ಷ್ಯಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಮೌಲ್ಯಗಳ ನೈತಿಕತೆ ಇಲ್ಲ: ಸಿ.ಟಿ. ರವಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಶಾಸಕರ ಕ್ರಾಸ್ ವೋಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನಾ ಸಮಿತಿಯ ನೇತೃತ್ವ ವಹಿಸಿದ್ದ ಸಿ.ಟಿ. ರವಿ ಇಂದು ತಮ್ಮ ತನಿಖಾ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಹಸ್ತಾಂತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬೇರೆ ರಾಜ್ಯಗಳಲ್ಲಿ ಅಡ್ಡಮತದಾನ ನಡೆದಾಗ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರು, ಈಗ ಕರ್ನಾಟಕದಲ್ಲಿ ತಾವೇ ಅನೈತಿಕ ಮಾರ್ಗಗಳನ್ನು ಬಳಸಿ ಅಡ್ಡಮತದಾನ ಮಾಡಿಸಿದ್ದಾರೆ. ಅಡ್ಡಮತದಾನವಾಗಿದೆ ಎಂದರೆ ಅದು ಕಾಂಗ್ರೆಸ್ ಮೇಲಿನ ಅಭಿಮಾನದಿಂದಲ್ಲ, ಬದಲಿಗೆ ಆಮಿಷಗಳ ಪ್ರಭಾವದಿಂದ” ಎಂದು ಕಿಡಿಕಾರಿದರು.
ಇದನ್ನೂ ಓದಿ:
ಶಿಸ್ತು ಕ್ರಮದ ಜವಾಬ್ದಾರಿ ಹೈಕಮಾಂಡ್‌ಗೆ
ನಮಗೆ ಕೊಟ್ಟಿದ್ದ ಜವಾಬ್ದಾರಿಯನ್ನು ನಾವು ಅಚ್ಚುಕಟ್ಟಾಗಿ ನಿಭಾಯಿಸಿದ್ದೇವೆ. ವರದಿಯನ್ನು ರಾಜ್ಯಾಧ್ಯಕ್ಷರಿಗೆ ಒಪ್ಪಿಸಲಾಗಿದ್ದು, ಇದನ್ನು ಕೇಂದ್ರ ವರಿಷ್ಠರಿಗೆ ರವಾನಿಸಲಾಗುತ್ತದೆ. ಇನ್ನು ಮುಂದೆ ತಪ್ಪಿತಸ್ಥ ಶಾಸಕರ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಜರುಗಿಸಬೇಕು ಎಂಬುದನ್ನು ಬಿಜೆಪಿ ಕೋರ್ ಕಮಿಟಿ ಮತ್ತು ರಾಷ್ಟ್ರೀಯ ಹೈಕಮಾಂಡ್ ತೀರ್ಮಾನಿಸಲಿದೆ” ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.



