ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ನಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವಂತಿಲ್ಲ ಎಂದು ತಿಳಿಸಿಲಾಗಿದೆ.
ಇದರ ನಡುವೆ ಡಿಸೆಂಬರ್ 24 ರಿಂದ ವಿಜಯ್ ಹಜಾರೆ ಏಕದಿನ ಟೂರ್ನಿಯನ್ನು ಕೆಎಸ್‌ಸಿಎ ಆಯೋಜನೆ ಮಾಡಲು ಸಜ್ಜಾಗಿದೆ. ಆದರೆ, ಇದುವರೆಗೂ ವಿಜಯ್ ಹಜಾರೆ ಟೂರ್ನಿಗೆ ಪೊಲೀಸರು ಅನುಮತಿ ನೀಡಿಲ್ಲ. ವಿರಾಟ್ ಕೊಹ್ಲಿ ಅವರನ್ನು ನೋಡುವ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ಇದು ದೊಡ್ಡ ಆಘಾತವನ್ನುಂಟು ಮಾಡಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಮತ್ತು ಡಿಸಿ ಪೊಲೀಸ್ ಇಲಾಖೆ ಹೊರಡಿಸಿದ ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳನ್ನು ಕೆಎಸ್‌ಸಿಎ ಪಾಲಿಸಿರುವ ಬಗ್ಗೆ ಪರಿಶೀಲನೆ ನಡೆಸಲು ಸ್ಥಳೀಯ ಪೊಲೀಸರನ್ನೊಳಗೊಂಡ ನುರಿತ ತಜ್ಞರ ತಂಡದ ಕಮಿಟಿ ಭೇಟಿ ನೀಡಲಿದೆ. ಪರಿಶೀಲನೆ ನಡೆಸಿದ ಬಳಿಕ ಕಮಿಟಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿ ನೀಡಿದ ಬಳಿಕ ಪಂದ್ಯಗಳನ್ನು ನಡೆಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

