Nagara Panchami | ಸಂಸ್ಕೃತಿಯ ಪ್ರಜ್ಞೆ, ಪರಿಸರದ ಸಮ್ಮಿಲನ: ನಾಗರ ಪಂಚಮಿ ಹಬ್ಬ! ಯಾಕೆ ಆಚರಿಸುತ್ತಾರೆ ಗೊತ್ತ?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಮಹತ್ವ ವಿಶೇಷ. ಅದರಲ್ಲಿ ಪೌರಾಣಿಕತೆ, ಪರಿಸರ ಸಂರಕ್ಷಣೆಯ ಅರಿವು ಹಾಗೂ ಸಾಮಾಜಿಕ ಜವಾಬ್ದಾರಿಯ ಗುಟ್ಟು ಹೊತ್ತಿರುವ ಹಬ್ಬವೆಂದರೆ ಅದು ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಲ್ಲಿ ಬರುವ ಈ ಹಬ್ಬ ಭವಿಷ್ಯದ ಎಲ್ಲಾ ಶುಭ ಆಚರಣೆಗಳಿಗೆ ಬುನಾದಿ. ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ ಹೀಗೆ ಹಬ್ಬಗಳ ಸರಣಿಗೆ ಮುನ್ನುಡಿ ಹಾಕುವ ಪ್ರಾಚೀನ ಸಂಪ್ರದಾಯವಿದು.

ರೈತನ ರಕ್ಷಕ ನಾಗ:
ಜನಪದ ಕತೆಗಳ ಪ್ರಕಾರ ನಾಗರ ಪಂಚಮಿ ಬರುವದು ಮುಂಗಾರಿನ ಮಧ್ಯದ ದಿನಗಳಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಬೆಳೆ ಬೆಳೆಯುವುದು ಜೋರಿನಲ್ಲಿ ನಡೆಯುತ್ತದೆ. ಇಲಿ, ಕಪ್ಪೆ ಹಾಗೂ ಮಿಡತೆಗಳು ಅಪಾರ ಪ್ರಮಾಣದಲ್ಲಿ ಬೆಳೆಗಳಿಗೆ ನಾಶ ತರುತ್ತವೆ. ಈ ನಾಶದಿಂದ ರೈತರ ಬೆಳೆಯನ್ನು ರಕ್ಷಿಸುವ ಪ್ರಾಣಿಗಳಲ್ಲಿ ಹಾವು ಮುಖ್ಯವಾದದು. ಹೀಗಾಗಿ, ಹಾವುಗಳಿಗೆ ಧನ್ಯವಾದ ಸಲ್ಲಿಸಲು ಮತ್ತು ಪರಿಸರ ಸಮತೋಲನ ಉಳಿಸಿಕೊಳ್ಳಲು ಈ ಹಬ್ಬ ಆಚರಿಸಲಾಗುತ್ತದೆ.

ಪುರಾಣ ಕಥೆಯ ಹಿನ್ನೆಲೆ:
ಸ್ಕಂದ ಪುರಾಣದ ಪ್ರಕಾರ, ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ.

ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.

ಸರ್ಪಯಜ್ಞ ನಿಲ್ಲಿಸಿದ ದಿನ:
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ.

ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನಬಳಿಗೆ ಹೋಗಿ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿ ಎಂದು ಆಚರಿಸಲಾಗುತ್ತೆದೆ.

ನಾಗಪೂಜೆಯ ವೈಜ್ಞಾನಿಕ ಅರ್ಥ:
ಹೆಸರುಗಳಿಂದಲೇ ತಿಳಿಯುವಂತೆ ಅನಂತ, ತಕ್ಷಕ, ವಾಸುಕೀ ಇತ್ಯಾದಿ ನಾಗ ದೇವತೆಗಳು ವಿವಿಧ ರೂಪಗಳಲ್ಲಿ ಪ್ರತಿಷ್ಠಿತವಾಗಿವೆ. ಹಾವುಗಳು ಪರಿಸರದ ಜೀವಜಾಲದ ಪ್ರಮುಖ ಅಂಗ. ಭೂಮಿಯಲ್ಲಿ ಹಾವುಗಳ ಸಂಖ್ಯೆ ಕಮ್ಮಿಯಾದರೆ ಇಲಿ, ಕೀಟಗಳ ಹಾವಳಿ ಇರುತ್ತದೆ. ಹೀಗಾಗಿ ಹಾವುಗಳ ರಕ್ಷಣೆ ನಮ್ಮ ಕರ್ತವ್ಯ ಎಂಬ ಸಂದೇಶ ಈ ಹಬ್ಬ ನೀಡುತ್ತದೆ.

ಇಂದು ನಾವೆಲ್ಲ ನಾಗ ದೇವರನ್ನು ಪೂಜಿಸುತ್ತೇವೆ. ಆದರೆ ಅದರ ಹಿಂದೆ ಇರುವ ಪೌರಾಣಿಕತೆ, ಪರಿಸರದ ಮೇಲಿನ ಪ್ರಭಾವ ಹಾಗೂ ಮಾನವೀಯ ಮೌಲ್ಯಗಳ ಕುರಿತ ಅರಿವು ಈ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!