ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹರ್ಷ

ಹೊಸದಿಗಂತ ವರದಿ ಸೋಮವಾರಪೇಟೆ:

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ಸರ್ಕಾರದ ಘೋಷಣೆ ಸ್ವಾಗತಾರ್ಹ ಕ್ರಮ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ತಿಳಿಸಿದ್ದಾರೆ.

ಹನ್ನೆರಡನೇ ಶತಮಾನದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಜಾತೀಯತೆ, ಕಂದಾಚಾರದ ವಿರುದ್ಧ ಹೋರಾಡಿದ ಧೀಮಂತರು, ಅಂದೇ ಅನುಭವ ಮಂಟಪ ಸ್ಥಾಪಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದವರು, ಕರ್ನಾಟಕದ ಆಚಾರ, ವಿಚಾರ ಸಾಂಸ್ಕೃತಿಕ ಸೊಗಡನ್ನು ಜಗತ್ತಿಗೆ ಪರಿಚಯಿಸಿದವರು ಬಸವಣ್ಣನವರು ಎಂದು ಬಣ್ಣಿಸಿದ್ದಾರೆ.

ಇಂತಹ ಮಹಾನ್ ವ್ಯಕ್ತಿಯನ್ನು ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಮಂತ್ರಿಮಂಡಲ, ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ನಿರ್ಧರಿಸಿ ಘೋಷಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ ಕ್ರಮವಾಗಿದ್ದು, ಇದು ಬಸವಾನುಯಾಯಿಗಳಲ್ಲಿ ಸಂತಸ ಮೂಡಿಸಿದೆ ಎಂದು ಮಹೇಶ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here