ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ಮೀಸಲಾತಿ ಕೊಡುವ ಸಂಬಂಧ ಉದ್ಭವಿಸಿದ ಹಿಂಸಾಚಾರ ವಾರಗಳೇ ಆದರೂ ಕಡಿಮೆ ಆಗಿಲ್ಲ.
ಇದೀಗ ಬಾಂಗ್ಲಾದೇಶದಲ್ಲಿ ರಾಷ್ಟ್ರವ್ಯಾಪಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗಲಭೆ ಮಾಡುವವರ ವಿರುದ್ಧ ಶೂಟ್ ಅಟ್ ಸೈಟ್ಆದೇಶ ನೀಡಲಾಗಿದೆ. ದೇಶದ ವಿವಿಧೆಡೆ ಸೈನಿಕರನ್ನು ನಿಯೋಜಿಸಿ ಭದ್ರತೆ ಬಿಗಿಗೊಳಿಸಲಾಗಿದೆ. ಇಂದು ಇಲ್ಲಿನ ಸರ್ವೋಚ್ಚ ನ್ಯಾಯಾಲಯ ಈ ಮೀಸಲಾತಿ ಪ್ರಕರಣದಲ್ಲಿ ತೀರ್ಪು ನೀಡಲಿದ್ದು, ಇನ್ನಷ್ಟು ಹೆಚ್ಚಿನ ಜಾಗ್ರತೆ ವಹಿಸಿ ಭದ್ರತೆ ಬಿಗಿಗೊಳಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಗಲಭೆಗಳಿಂದ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈವರೆಗೆ 133 ಜನರು ಬಲಿಯಾಗಿರುವುದು ತಿಳಿದುಬಂದಿದೆ. ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ಶುರುವಾದ ಪ್ರತಿಭಟನೆ ಬಳಿಕ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರ ವಿರುದ್ದ ಹಿಂಸಾಚಾರ ಮೊದಲುಗೊಂಡಿತಾದರೂ ಮೀಸಲಾತಿ ಸಮರ್ಥಕರೂ ಕೂಡ ಸಂಘರ್ಷದಲ್ಲಿ ಸೇರಿಕೊಂಡಿದ್ದಾರೆ. ಇದರೊಂದಿಗೆ ಬಾಂಗ್ಲಾದಲ್ಲಿ ಸಿವಿಲ್ ವಾರ್ ರೀತಿಯ ಸ್ಥಿತಿ ನಿರ್ಮಾಣವಾಗಿದೆ.
ಹಿಂಸಾಚಾರ ನಿಯಂತ್ರಿಸಲು ಮೂರು ದಿನಗಳ ಹಿಂದೆ ಬಾಂಗ್ಲಾದೇಶದಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಶನಿವಾರ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅನುವಾಗುವಂತೆ ಒಂದಷ್ಟು ಕಾಲ ಕರ್ಫ್ಯೂ ತೆರವುಗೊಳಿಸಲಾಗಿತ್ತು. ಈಗ ಅನಿರ್ದಾವಧಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.