ಕಾವೇರಿ ನೀರು ಕೇಳಿದ ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಿದ CWRC!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇದರ ನಡುವೆ ಏಪ್ರಿಲ್ ಹಾಗೂ ಮೇ ತಿಂಗಳ ತಮಿಳುನಾಡಿನ ಪಾಲಿನ ನೀರನ್ನು ಬಿಡುವಂತೆ ಅರ್ಜಿ ಸಲ್ಲಿಸಿದ ತಮಿಳುನಾಡು ಸರ್ಕಾರಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಬರಿಗೈಯಲ್ಲಿ ವಾಪಸ್ ಕಳಿಸಿದೆ.

ನೀರು ಬಿಡುವಂತೆ ಸಲ್ಲಿಕೆ ಮಾಡಿದ ಅರ್ಜಿಯನ್ನು ತಿರಸ್ಕರಿಸಿದೆ.

ಯಾರಾದ್ರೂ ಹಾಳಾಗೋಗ್ಲಿ ನಾವು ನೆಟ್ಟಗಿದ್ದರೆ ಸಾಕು ಎನ್ನುವ ಮನಸ್ಥಿತಿಯಿಂದ ಕರ್ನಾಟಕದಲ್ಲಿ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದರೂ, ತಮಗೆ ಸಾಮಾನ್ಯ ವರ್ಷಗಳಂತೆ ನೀರು ಕೊಡಬೇಕು ಎಂದು ತಮಿಳುನಾಡು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ನಮಗೆ ಕರ್ನಾಟಕದಿಂದ ಏಪ್ರಿಲ್ ಮತ್ತು ಮೇ ತಿಂಗಳ ನೀರನ್ನು ಬಿಟ್ಟಿಲ್ಲ. ಕೂಡಲೇ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯಿಂದ ತಮಿಳುನಾಡಿಗೆ ನೀರನ್ನು ಹರಿಸುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.

ತಮಿಳುನಾಡಿನ ಅರ್ಜಿಯನ್ನು ಸ್ವೀಕರಿಸಿ ಪರಿಶೀಲನೆ ಮಾಡಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಇಲ್ಲ. ಅಲ್ಲಿನ ಜನರಿಗೆ ಕುಡಿಯುವ ನೀರಿಗೂ ಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಉತ್ತರಿಸಿದೆ.

ಇನ್ನು ಕಾವೇರಿ ನೀರಿನ ಬಿಕ್ಕಟ್ಟು ಬಗೆಹರಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಾಪಿಸಲಾದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) 2023-24ನೇ ಸಾಲಿನ ಮಳೆಗಾಲದ ನೀರು ಹಂಚಿಕೆ ಸಭೆಯು ಪೂರ್ಣಗೊಂಡಿದೆ. ಆದರೆ, ಮತ್ತೊಂದು ಸಂಸ್ಥೆಯಾದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯು ಮೇ 16ರಂದು ನಡೆಯಲಿದೆ. ಈ ಸಭೆಯು ಈ ಸಾಲಿನ ಮಳೆಗಾಲದ ಕಾವೇರಿ ನೀರು ಹಂಚಿಕೆಯ ಕೊನೆಯ ಸಭೆಯಾಗಿದೆ. ಈ ಸಭೆಯಲ್ಲಿಯೂ ನೀರು ಬಿಡುವಂತೆ ಆದೇಶ ನೀಡದಿದ್ದರೆ ಕರ್ನಾಟಕಕ್ಕೆ ಕುಡಿಯುವ ನೀರನ್ನು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದರೆ, ರಾಜ್ಯಕ್ಕೆ ಸಂಕಷ್ಟ ಎದುರಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. Dear sir
    This is correct but a our rulling government put application in front of cavari river pradikara spot verification of water both state it helps next meeting
    Foolish government not doing this.this is collision with Tamil Nadu

LEAVE A REPLY

Please enter your comment!
Please enter your name here