ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಅಪರಾಧಿಗಳು ಈಗ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಭೀತಿಯ ಮೂಲಕ ವೃದ್ಧರನ್ನು ಗುರಿಯಾಗಿಸುತ್ತಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ವಾಸವಿರುವ NRI ಡಾಕ್ಟರ್ ದಂಪತಿಯನ್ನು 17 ದಿನಗಳ ಕಾಲ ಭಯಭೀತಗೊಳಿಸಿ, ಬರೋಬ್ಬರಿ 15 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮೋಸಕ್ಕೊಳಗಾದವರು ಡಾ. ಓಂ ತನೇಜಾ ಮತ್ತು ಡಾ. ಇಂದಿರಾ ತನೇಜಾ. ಸುಮಾರು 48 ವರ್ಷ ಅಮೆರಿಕಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ಈ ದಂಪತಿ 2015ರಲ್ಲಿ ಭಾರತಕ್ಕೆ ವಾಪಸ್ಸಾಗಿದ್ದರು. ಡಿಸೆಂಬರ್ 24ರಂದು ಅವರಿಗೆ ಬಂದ ಕರೆ ಈ ದುರಂತಕ್ಕೆ ಆರಂಭವಾಯಿತು. ಕರೆ ಮಾಡಿದವರು ತಾವು ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅರೆಸ್ಟ್ ವಾರಂಟ್ ಇದೆ ಎಂದು ಬೆದರಿಸಿದ್ದಾರೆ.
ಅದರ ಬಳಿಕ ಡಿಸೆಂಬರ್ 24ರಿಂದ ಜನವರಿ 10ರವರೆಗೆ ವೀಡಿಯೊ ಕಾಲ್ ಮೂಲಕ ಅವರನ್ನು ನಿರಂತರ ನಿಗಾದಲ್ಲಿಟ್ಟಿದ್ದರು. ಮನೆಯೊಳಗೇ ಇರಿಸಿ, ಹೊರಗೆ ಹೋದರೂ ಕರೆ ಮಾಡಿ ಬೆದರಿಕೆ ಹಾಕಲಾಗುತ್ತಿತ್ತು. 77 ವರ್ಷದ ಡಾ. ಇಂದಿರಾ ತನೇಜಾರವರಿಂದ ಎಂಟು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 14.85 ಕೋಟಿ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಹಣದ ದೊಡ್ಡ ವಹಿವಾಟು ಗಮನಿಸಿದ ಬ್ಯಾಂಕ್ ಸಿಬ್ಬಂದಿ ಪ್ರಶ್ನೆ ಮಾಡಿದರೂ, ಸೈಬರ್ ವಂಚಕರು ಏನು ಹೇಳಬೇಕು ಎಂದು ದಂಪತಿಗೆ ಮುಂಚಿತವಾಗಿಯೇ ಸೂಚಿಸಿದ್ದರು. ಕೊನೆಗೆ ಜನವರಿ 10ರಂದು ತಾವು ಎಷ್ಟು ದೊಡ್ಡ ಮೋಸ ಹೋಗಿರುವುದು ಅರಿವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಗಂಭೀರ ಪ್ರಕರಣವನ್ನು ದೆಹಲಿ ಪೊಲೀಸರ ಸ್ಪೆಷಲ್ ಸೆಲ್‌ನ ಸೈಬರ್ ಘಟಕಕ್ಕೆ ವಹಿಸಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ.



