ಹೊಸದಿಗಂತ ವರದಿ ಚಿತ್ರದುರ್ಗ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್-2026) ಅತ್ಯಂತ ಪ್ರಮುಖವಾದ ಪ್ರಕ್ರಿಯೆಯಾಗಿದ್ದು, ಅರ್ಹ ಮತದಾರರೆಲ್ಲರೂ ತಮ್ಮ ಮನೆ ಬಾಗಿಲಿಗೆ ಬಂದಿರುವ ಗಣತಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿಯ ವಿಶೇಸ ಪರಿಷ್ಕರಣೆ ಕುರಿತು ಅರಿವು ಮೂಡಿಸಲು ಶನಿವಾರ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಆಯೋಜಿಸಲಾಗಿದ್ದ ‘ಸೈಕಲ್ ಜಾಥಾ’ ಹಾಗೂ ‘ವಾಕಥಾನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
೨೦೦೨ರ ನಂತರ ಇದೀಗ ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ಎಸ್‌ಐಆರ್ ಚಟುವಟಿಕೆಗಳು ನಡೆಯುತ್ತಿವೆ. ಇದು ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಸಿಕ್ಕಿರುವ ಸುವರ್ಣಾವಕಾಶವಾಗಿದೆ. ಮತ ಚಲಾಯಿಸಲು ಅರ್ಹರಾಗಿರುವ ಎಲ್ಲರ ಮನೆಗೂ ಈಗಾಗಲೇ ಅರ್ಜಿ ತಲುಪಿರಬಹುದು. ಒಂದು ವೇಳೆ ತಲುಪದಿದ್ದರೆ ಶೀಘ್ರದಲ್ಲೇ ತಲುಪಲಿದೆ. ಮತದಾರರು ಆ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ವಾಪಸ್ ನೀಡಬೇಕು ಎಂದು ವಿನಂತಿಸಿದರು.
ನಿಮ್ಮ ಮನೆಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕುರಿತು ಜಾಗೃತಿ ಮೂಡಿಸಬೇಕು. ನಿಮ್ಮ ತಂದೆ-ತಾಯಿ, ಕುಟುಂಬಸ್ಥರು ಹಾಗೂ ಮತದಾನದ ಹಕ್ಕು ಹೊಂದಿರುವ ನೆರೆಹೊರೆಯವರಿಗೆ ಎಸ್‌ಐಆರ್ ಚವಟುವಟಿಕೆ ಈ ಬಗ್ಗೆ ತಿಳಿಸಿ. ಮನೆಗೆ ಬಂದಿರುವ ಅರ್ಜಿಯನ್ನು ಭರ್ತಿ ಮಾಡಿ ಬಿಎಲ್‌ಒಗೆ ನೀಡುವಂತೆ ಒತ್ತಾಯಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಿಂದ ಆರಂಭವಾದ ಎಸ್‌ಐಆರ್ ಜಾಗೃತಿ ಜಾಥಾವು ಬಿ.ಡಿ.ರಸ್ತೆಯ ಮೂಲಕ ಸಾಗಿ, ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರದ ಮೂಲಕ ಸಾಗಿ ಗಾಂಧಿ ವೃತ್ತದವರೆಗೂ ಸಾಗಿ ಪುನಃ ಜಿಲ್ಲಾಧಿಕಾರಿಗಳ ಕಚೇರಿಯ ಒನಕೆ ಓಬವ್ವ ವೃತ್ತದಲ್ಲಿ ಮುಕ್ತಾಯವಾಯಿತು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಅಲ್ಪಸಂಖ್ಯಾರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, ಸಹಾಯಕ ಯೋಜನಾಧಿಕಾರಿ ಸುಮ, ಚಿತ್ರದುರ್ಗ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಜಿಲ್ಲಾ ನರೇಗಾ ಐಇಸಿ ಸಮಾಲೋಚಕ ಎಂ.ಎಸ್.ರವೀಂದ್ರನಾಥ್, ಜಿಲ್ಲಾ ವಾಶ್ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್ ಭಾಗವಹಿಸಿದ್ದರು.



