ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಮಹಾಸಾಗರದಲ್ಲಿ ರೂಪುಗೊಂಡ ಬಕುಂಗ್ ಚಂಡಮಾರುತ ದುರ್ಬಲಗೊಂಡಿದ್ದರೂ ಅದರ ಪರಿಣಾಮ ದಕ್ಷಿಣ ಭಾರತದ ಹವಾಮಾನದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಗಂಟೆಗೆ ಸುಮಾರು 75 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿರುವ ಈ ಚಂಡಮಾರುತದಿಂದ ಉಂಟಾದ ಮೋಡಗಳ ಗುಂಪು ತಮಿಳುನಾಡಿನತ್ತ ಚಲಿಸುತ್ತಿದ್ದು, ಅಲ್ಲಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.
ಇತ್ತ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ. ಈಗಾಗಲೇ ತಂಪಾದ ರಾತ್ರಿಗಳನ್ನು ಅನುಭವಿಸುತ್ತಿರುವ ನಗರದಲ್ಲಿ ಮುಂದಿನ ವಾರ ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ನಿಂದ 12 ಡಿಗ್ರಿಯವರೆಗೆ ಇಳಿಯುವ ಸಾಧ್ಯತೆ ಇದೆ. ಈ ಮಟ್ಟಕ್ಕೆ ತಾಪಮಾನ ಕುಸಿದರೆ, 2016ರ ನಂತರದ ಅತ್ಯಂತ ಶೀತಲ ಡಿಸೆಂಬರ್ ಎಂದು ದಾಖಲಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮುಂದಿನ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯ ಸಾಧ್ಯತೆ ಇಲ್ಲ. ಮುಂಜಾನೆ ಮಂಜು ಆವರಿಸುವ ಸಾಧ್ಯತೆ ಇದೆ. ಕಡಿಮೆ ಆರ್ದ್ರತೆಯ ಕಾರಣ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವ ನಿರೀಕ್ಷೆಯಿದೆ.

