ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಉಗ್ರರೂಪದಲ್ಲಿ ರೂಪುಗೊಂಡಿರುವ ಬಿಪರ್ಜೋಯ್ ಚಂಡಮಾರುತವು ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಪ್ರಕಟಿಸಿದೆ. ಈ ತೀವ್ರ ಚಂಡಮಾರುತವು ಗುಜರಾತ್‌ನ ಕಚ್‌ಗೆ ಅಪ್ಪಳಿಸುವ ಸಾಧ್ಯತೆಯಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ) ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಎಚ್ಚರಿಕೆ ನೀಡಿದೆ. ‘ಬಿಪರ್‌ಜೋಯ್’ ತೀವ್ರ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಭಾರೀ ಹಡಗುಗಳನ್ನು ಕಾಂಡ್ಲಾ ಬಂದರಿನಿಂದ ಇತರ ಬಂದರುಗಳಿಗೆ ಸ್ಥಳಾಂತರಿಸಲಾಯಿತು. ನಿನ್ನೆ 6 ಹಡಗುಗಳನ್ನು ಸ್ಥಳಾಂತರಿಸಲಾಗಿದ್ದು, ಇಂದು 11 ಹಡಗುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು ಎಂದು ಬಂದರು ಅಧಿಕಾರಿಗಳು ಪ್ರಕಟಿಸಿದ್ದಾರೆ. ಹಡಗು ಮಾಲೀಕರು ಜಾಗರೂಕರಾಗಿರಬೇಕು ಎಂದು ಐಎಂಡಿ ಸೂಚಿಸಿದೆ. ಕಾಂಡ್ಲಾದ ತಗ್ಗು ಪ್ರದೇಶಗಳ ಜನರನ್ನು ಗಾಂಧಿಧಾಮಕ್ಕೆ ಸ್ಥಳಾಂತರಿಸಲಾಯಿತು. ಚಂಡಮಾರುತದ ಭೀತಿಯಿಂದ ಯಾವುದೇ ಪ್ರಾಣಹಾನಿಯಾಗದಂತೆ ಗುಜರಾತ್ ಸರ್ಕಾರ ಸಂಪೂರ್ಣ ಕ್ರಮಗಳನ್ನು ಕೈಗೊಂಡಿದೆ. ನೆರವು ತಂಡಗಳಿಗೆ ಎಚ್ಚರಿಕೆ ನೀಡಲಾಗಿದೆ.
ಸೋಮವಾರ ಬೆಳಿಗ್ಗೆ ಬಿಪಾರ್ಜೋಯ್ ಅತ್ಯಂತ ತೀವ್ರವಾದ ಸೈಕ್ಲೋನಿಕ್ ಸ್ಟಾರ್ಮ್ ಆಗಿ ಬಲಗೊಂಡಿತು. ಈ ಚಂಡಮಾರುತವು ಇದೇ ತಿಂಗಳ 15ರ ಮಧ್ಯಾಹ್ನದವರೆಗೆ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಕರಾವಳಿಯನ್ನು ದಾಟಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 13 ರಂದು ಸಿಂಧ್ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತವು ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಸಂಬಂಧಿಸಿದ ಅಧಿಕಾರಿಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಿದೆ. ಭಾನುವಾರ ರಾತ್ರಿ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಿದೆ.