ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮ ರಾಜಸ್ಥಾನದ ಜಲೋರ್, ಸಿರೋಹಿ ಮತ್ತು ಬಾಡ್ಮೇರ್ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪಾಳಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಜಲಾವೃತವಾದ ಪ್ರದೇಶಗಳಲ್ಲಿ ಸಿಲುಕಿದ್ದ ಆರು ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣೆ ಮಾಡಿದೆ.
ಇದುವರೆಗೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಯಾವುದೇ ಸಂಭವನೀಯ ಅಪಾಯ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಕ್ಷಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ರಾಜ್ಯ ವಿಪತ್ತು ಮತ್ತು ಪರಿಹಾರ ಕಾರ್ಯದರ್ಶಿ ಪಿ.ಸಿ. ಕಿಶನ್ ಹೇಳಿದ್ದಾರೆ.
ಬಾಡ್ಮೇರ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನಾಲ್ಕೈದು ಸಣ್ಣ ಅಣೆಕಟ್ಟೆಗಳಿಗೆ ಹಾನಿಯಾಗಿದೆ. ಪಿಂಡವಾಡ, ಆಬು ರೋಡ್ ಮತ್ತು ರೇವದರ್‌ನಲ್ಲಿ ದೊಡ್ಡ ಅಣೆಕಟ್ಟುಗಳು ಭರ್ತಿಯಾಗಿದ್ದು, ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ. ಸಿರೋಹಿ ಜಿಲ್ಲೆಯಲ್ಲಿರುವ ಬತೀಸ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 315 ಮೀಟರ್‌ಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.