ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿತ್ರಾಂಗ್ ಚಂಡಮಾರುತ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಾಂ ಹಾಗೂ ತ್ರಿಪುರದಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಬಂಗಾಳ ಸರ್ಕಾರವು ಅಪಾಯಕಾರಿ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದು, ಪರಿಹಾರ ಸಾಮಾಗ್ರಿ ವಿತರಣೆ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ದಕ್ಷಿಣ 24 ಪರಗಣಗಳ ಬಕ್ಖಾಲಿ ಸಮುದ್ರ ತೀರದಲ್ಲಿ ನಾಗರೀಕ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದ್ದು, ಬೀಚ್ನಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ಬಂದ್ ಮಾಡಲಾಗಿದೆ. ಹಾಗೂ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸಿತ್ರಾಂಗ್ ಚಂಡಮಾರುತದಿಂದಾಗಿ ಮಂಗಳವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವುದರಿಂದ “ಎಚ್ಚರವಾಗಿರಿ” ಎಂದು ಜನರಿಗೆ ಮನವಿ ಮಾಡಿದ್ದಾರೆ.
ಕೋಲ್ಕತಾದಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಕಚೇರಿಯು ತಿಳಿಸಿರುವಂತೆ ಸಿತ್ರಾಂಗ್ ಚಂಡಮಾರುತ ಈಗ ಗಂಗಾ ನದಿಯು ಬಂಗಾಳ ಕೊಲ್ಲಿಯನ್ನು ಸೇರುವ ಸಾಗರ ದ್ವೀಪದಿಂದ 380 ಕಿ.ಮೀ.ದೂರದಲ್ಲಿದೆ. ಚಂಡಮಾರುತವು ಮಂಗಳವಾರ ನಸುಕಿನ ವೇಳೆಗೆ ಸುಂದರಬನ್ಸ್ನ ತಿನ್ಕೋನಾ ದ್ವೀಪ ಮತ್ತು ಬಾಂಗ್ಲಾದೇಶದ ಸ್ಯಾಂಡ್ವಿಪ್ ನಡುವೆ ಅಪ್ಪಳಿಸುವ ನಿರೀಕ್ಷೆಯಿದೆ.
ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ 24 ಪರಗಣಗಳ,ಉತ್ತರ 24 ಪರಗಣಗಳ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಗಂಟೆಗೆ 70ರಿಂದ 80 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.