ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿತ್ರಾಂಗ್ ಚಂಡಮಾರುತದಿಂದಾಗಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗಿದ್ದು, ಹಲವಾರು ಮನೆಗಳು ಹಾನಿಗೊಳಗಾಗಿವೆ. ಸೋಮವಾರ ರಾತ್ರಿ ಚಂಡಮಾರುತದಿಂದಾಗಿ ಜಿಲ್ಲೆಯ ವಿವಿಧೆಡೆ ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ವರದಿಗಳ ಪ್ರಕಾರ, ಮಧ್ಯ ಅಸ್ಸಾಂ ಜಿಲ್ಲೆಯ ಕಲಿಯಾಬೋರ್, ಬಮುನಿ, ಸಕ್ಮುಥಿಯಾ ಟೀ ಎಸ್ಟೇಟ್ ಮತ್ತು ಬೋರಾಲಿಗಾಂವ್ ಪ್ರದೇಶಗಳಲ್ಲಿ ಚಂಡಮಾರುತದಿಂದಾಗಿ ಹಲವಾರು ಮನೆಗಳು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಇತ್ತ ಪಶ್ಚಿಮ ಬಂಗಾಳದ ದಕ್ಷಿಣ ಬಕ್ಖಾಲಿ ಕಡಲತೀರದ ಕರಾವಳಿಗೆ ಅಲೆಗಳು ಅಪ್ಪಳಿಸಿವೆ. ಪ್ರವಾಸಿಗರು ಮತ್ತು ಸ್ಥಳೀಯರಿಗೆ ಸಮುದ್ರದ ಸಮೀಪಕ್ಕೆ ಹೋಗದಂತೆ ನಾಗರಿಕ ರಕ್ಷಣಾ ಇಲಾಖೆ ಎಚ್ಚರಿಸಿದೆ. ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸಿತ್ರಾಂಗ್ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಭಾರೀ ಮಳೆಯನ್ನು ಸೂಚಿಸುವ ರೆಡ್ ಅಲರ್ಟ್ ನೀಡಲಾಗಿತ್ತು.
ಮಂಗಳವಾರದಂದು ತ್ರಿಪುರಾದಲ್ಲಿ ಗುಡುಗು, ಮಿಂಚು ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿತ್ರಾಂಗ್ ಚಂಡಮಾರುತದಿಂದಾಗಿ ಮಂಗಳವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವುದರಿಂದ ಎಚ್ಚರವಾಗಿರಿ ಎಂದು ಜನರಿಗೆ ಮನವಿ ಮಾಡಿದ್ದಾರೆ.