ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀ ತಯಾರಿಸುವಾಗ ಸಿಲಿಂಡರ್ ಸ್ಫೋಟಗೊಂಡ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಯಿ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂಜನಾಬಾಯಿ (28), ಖುಷಿ (9), ಕಾರ್ತಿಕ್ (8) ಮತ್ತು ಕೀರ್ತಿ (5) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಗ್ರಾಮದ ಅಧಿದೇವತೆ ಯಲ್ಲಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಅಂಜನಾಬಾಯಿ ಮನೆಗೆ ಬಂದು ಚಹಾ ಮಾಡಲು ಮುಂದಾಗಿದ್ದರು. ಚಹಾ ಮಾಡಲು ಗ್ಯಾಸ್ ಹೊತ್ತಿಸುವಾಗಲೇ ಸಿಲಿಂಡರ್ ಸ್ಫೋಟಗೊಂಡಿದೆ.
ಅಂಜನಾಬಾಯಿ ಅವರೊಂದಿಗೆ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರರು ಸಾಮೂಹಿಕವಾಗಿ ದೇವಸ್ಥಾನದ ಬಳಿ ಇದ್ದುದರಿಂದ ಬಚಾವ್ ಆಗಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.