ಸಿಲಿಂಡರ್‌ ಬೆಲೆ ಇಳಿಕೆ- ಇದೊಂದು ರಾಜಕೀಯ ಗಿಮಿಕ್: ಜಗದೀಶ ಶೆಟ್ಟರ ಆರೋಪ

ಹೊಸದಿಗಂತ ವರದಿ ಹುಬ್ಬಳ್ಳಿ:

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ 200 ರೂ. ಇಳಿಸಿದ್ದು, ಇದೊಂದು ರಾಜಕೀಯ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಆರೋಪಿಸಿದರು.

ಬುಧವಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯಾವುದೇ ರಾಜಕೀಯ ಗಿಮಿಕ್ ಮಾಡುತ್ತಿಲ್ಲ‌. ಚುನಾವಣಾ ಪೂರ್ವದಲ್ಲಿ ಘೋಷಿಸಿದ ಯೋಜನೆಗಳನ್ನು ಕೊಟ್ಟ ಮಾತಿನಂತೆ ಅನುಷ್ಠಾನಗೊಳಿಸುತ್ತಿದೆ ಎಂದರು.

ಬಿಜೆಪಿ ನಾಯಕರು ಗಿಮಿಕ್ ಹಾಗೂ ಮತ್ತೊಂದು ಅನ್ನೊದು ಬಿಟ್ಟು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.

ಬಿಜೆಪಿಯು ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದಕ್ಕಿಂತ ಮುಂಚೆ ತಮ್ಮ ಪಕ್ಷದ ವ್ಯವಸ್ಥೆ ಬಗ್ಗೆ ಅರಿಯಲಿ. ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಇನ್ನೂ ನೇಮಕ ಮಾಡಲಾಗಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಜಾರಿಗೆ ತಂದಿರುವ ಯೋಜನೆಗಳನ್ನು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ರಾಜ್ಯದ ಕೋಟ್ಯಾಂತರ ಜನರಿಗೆ ಸರ್ಕಾರದ ಯೋಜನೆ ಲಾಭವಾಗುತ್ತಿರುವುರಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪರಿಸ್ಥಿತಿ ಏನು ಎಂಬ ಭಯ ಬಿಜೆಪಿಯವರಿಗೆ ಶುರುವಾಗಿದೆ. ಆದರಿಂದ ಏನು ತಿಳಿಯದೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಪಬ್, ಬಾರು ಎಲ್ಲ ಸರ್ಕಾರ ಇದ್ದಾಗಲೂ ಇವೆ. ಬೆಳಗಿನವರೆಗೂ ನಡೆಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಪುರಾವೆ ನೀಡಬೇಕು. ಬಿಜೆಪಿ ಸರ್ಕಾರ ಇದ್ದಾಗ ನಡೆದಿಲ್ಲವಾ? ಬಿಜೆಪಿ ಕೊಳ್ಳೆ ಹೊಡಿದಿರುವ ಬಗ್ಗೆ ಕೋರ್ ಕಮಿಟಿ ಹಾಗೂ ಪಕ್ಷ ಮಟ್ಟದಲ್ಲಿ ಹೇಳಿದ್ದೇನೆ. ಬೇಕಾಬಿಟ್ಟಿ ಆಡಳಿತ ನಡೆಸಿದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ಬಿಜೆಪಿ ಮನೆಗೆ ನಾಯಕರಿಲ್ಲದಂತಾಗಿದೆ. ಬಿಜೆಪಿಯ ಕೆಲವು ನಾಯಕರು ಸಲಹೆ ಕೇಳುತ್ತಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಅವರ ಜೊತೆ ಚರ್ಚೆ ಮಾಡಿಲ್ಲ. ಮುಂದೆ ಏನು ನಿರ್ಧಾರ ಕೈಗೊಳ್ಳುತ್ತಾರೆ ಗೊತ್ತಿಲ್ಲ. ಅವರ ಜೊತೆ ಮಾತುಕತೆ ಮಾಡಿದ ಬಳಿಕ ಏನಾಗುತ್ತದೆ ನೋಡೋಣ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!