ಹೊಸ ದಿಗಂತ ವರದಿ, ಹುಬ್ಬಳ್ಳಿ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್ ತತ್ವ ಸಿದ್ಧಾಂತದ ವಿರುದ್ಧವಾಗಿದ್ದರೇ ಅವರನ್ನು ಪಕ್ಷದಿಂದ ಹೊರಗೆ ಹಾಕಲಿ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಮಹಾಕುಂಭ ಮೇಳದಲ್ಲಿ ಹಾಗೂ ಈಶಾ ಫೌಂಡೇಶನ್ ಸಮಾರಂಭದಲ್ಲಿ ಭಾಗಹಿಸಿರುವುದರಲ್ಲಿ ಯಾವುದೇ ದೊಡ್ಡಸ್ಥಿಕೆ ಇಲ್ಲ. ಇದು ಸರಿಯಲ್ಲ ಅಂದರೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದರು.
ಕಾಂಗ್ರೆಸ್‌ಗೆ ಹಿಂದುಗಳ ಮೇಲೆ ದ್ವೇಷವಿದೆ. ಆದ್ದರಿಂದ ಆ ಪಕ್ಷ ಉದ್ದಾರ ಆಗಿಲ್ಲ. ಹಿಂದುಗಳಿಲ್ಲದೇ ಕಾಂಗ್ರೆಸ್ ರಾಜಕಾರಣ ಮಾಡುತ್ತದೆ ಎಂದರೆ ಅವರ ಹಣೆ ಬರಹ. ಆದರೆ ಹಿಂದುಗಳನ್ನು ಕೀಳಾಗಿ ಕಾಣುವುದಕ್ಕೆ ಕಾಂಗ್ರೆಸ್ ಅವನತಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದು ವಿರೋಧಿಯಾಗಿವೆ. ಈ ದೇಶ ಹಿಂದುಗಳ ದೇಶ, ಇಲ್ಲಿ ಹಿಂದು ರಾಷ್ಟ್ರ ಅನ್ನುವ ಪರಂಪರೆ ಇದೆ. ಇದಕ್ಕೆ ಎಲ್ಲಿಯೂ ಅಡ್ಡಿಯಾಗಬಾರದು. ಕಮ್ಯುನಿಷ್ಟ್ ಸಹ ಹಿಂದು ದೇವಾಲಯಕ್ಕೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಸಾಕಷ್ಟು ನಾಯಕರು ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ರಾಜಕಾರಣಕ್ಕೆ, ಧರ್ಮಕ್ಕೆ ತಳಕು ಹಾಕಬಾರದು ಎಂದು ಹೇಳಿದರು.
ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಈ ಮೊದಲು ಮರಾಠ ಹಾಗೂ ಕನ್ನಡಿಗರ ನಡುವೆ ಅಂತರವಿತ್ತು. ಈಗ ಅದು ಬದಲಾಗಿದ್ದು, ಸಹೋದದರಂತೆ ಬದುಕುತ್ತಿದ್ದಾರೆ. ಸಂಘರ್ಷ ಯಾರು ಮಾಡಬಾರದು. ಹಲ್ಲೆ ನಡೆಸಿದರವ ವಿರುದ್ಧ ಕ್ರಮ ಆಗಬೇಕು. ನಿರ್ವಾಹಕನ ಮೇಲೆ ಪ್ರಕರಣ ದಾಖಲಿಸಿದ್ದು, ಸಹ ತಪ್ಪು. ನಾವೆಲ್ಲರೂ ಭಾರತೀಯರೆಂದು ಅರಿಯಬೇಕು. ನಾವು ಪಾಕಿಸ್ಥಾನದಲ್ಲಿ ಇಲ್ಲ. ಸಹೋದರರಂತೆ ಜೀವನ ನಡೆಸುತ್ತಿದ್ದು, ಅದಕ್ಕೆ ಯಾರು ಕೆಡಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.