ಹೊಸ ದಿಗಂತ ಡಿಜಿಟಲ್ ಡೆಸ್ಕ್:
IPS ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬೆಂಗಳೂರಿನ 7ನೇ ಎಸಿಎಂಎಂ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಲಾಗಿದೆ.
2023ರ ಫೆಬ್ರವರಿ 19ರಂದು ರೋಹಿಣಿ ಸಿಂಧೂರಿ ಅವರು ಮಾಧ್ಯಮ ಹೇಳಿಕೆ ನೀಡಿದ್ದು,ಅದನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಾರೆ ಎಂದು IPS ಅಧಿಕಾರಿ ಡಿ. ರೂಪಾ ಆರೋಪಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರ ಹೇಳಿಕೆಯನ್ನು 1.8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಈ ಅವಹೇಳನಕಾರಿ ಹೇಳಿಕೆ ನಂತರ ತಮ್ಮ ವರ್ಗಾವಣೆ ಆಗಿದ್ದು, 6 ತಿಂಗಳವರೆಗೆ ಸಂಬಳ ನೀಡದೇ ಹುದ್ದೆ ಇಲ್ಲದೇ ವರ್ಗಾಯಿಸಿದ್ದರು. ರೋಹಿಣಿ ಸಿಂಧೂರಿ ಹೇಳಿಕೆಯಿಂದ, ತಂಗಿ, ಪತಿ, ಮಕ್ಕಳಿಗೂ ಮಾನಸಿಕ ಯಾತನೆ ಆಗಿದೆ. ಹೀಗಾಗಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸುವಂತೆ ರೂಪಾ ಅವರು ಅರ್ಜಿ ಸಲ್ಲಿಸಿದ್ದಾರೆ.
ಡಿ. ರೂಪಾ ಅವರ ಅರ್ಜಿ ಕೈಗೆತ್ತಿಕೊಂಡಿರುವ ಬೆಂಗಳೂರಿನ 7ನೇ ಎಸಿಎಂಎಂ ಕೋರ್ಟ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ ಮಾಡಿದೆ.
ಒಂದು ವರ್ಷದ ಹಿಂದೆಯೇ ಡಿ.ರೂಪಾ ಹೇಳಿಕೆಯಿಂದ ಮಾನನಷ್ಟ ಆಗಿದೆ ಎಂದು ರೋಹಿಣಿ ಸಿಂಧೂರಿ ಅವರು ಕೇಸ್ ದಾಖಲಿಸಿದ್ದರು. ಈ ಕೇಸ್ ರದ್ದುಪಡಿಸಲು ಕೋರಿ ಡಿ.ರೂಪಾ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಚಿಲೇರಿದ್ದರು. ಹೈಕೋರ್ಟ್ ಈ ಕೇಸ್ ರದ್ದುಪಡಿಸಲು ನಿರಾಕರಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಇಬ್ಬರು ಅಧಿಕಾರಿಗಳು ರಾಜೀ ಮಾಡಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಲಾಯರ್ ಕಚೇರಿ, ಸುಪ್ರೀಂಕೋರ್ಟ್‌ನಲ್ಲಿ ಕಾಲ ಕಳೆಯುವ ಬದಲು ರಾಜಿ ಮಾಡಿಕೊಳ್ಳಿ ಎನ್ನಲಾಗಿತ್ತು. ಆದರೆ ಮಧ್ಯಸ್ಥಿಕೆ ಕೇಂದ್ರಕ್ಕೆ ಕೇಸ್ ವಹಿಸಿದರೂ ರಾಜೀ ಮಾಡಿಕೊಳ್ಳಲು ಇಬ್ಬರು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಲಿಲ್ಲ.ಈ ಬೆಳವಣಿಗೆ ಬಳಿಕ ಈಗ ದಿಢೀರನೇ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಅವರು ಮಾನನಷ್ಟ ಕೇಸ್ ದಾಖಲಿಸಿದ್ದಾರೆ. ಈಗ ಇಬ್ಬರು ಪರಸ್ಪರರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದಂತಾಗಿದೆ.