ದಕ್ಷಿಣ ಕನ್ನಡ ಜಿಲ್ಲಾಡಳಿತ ಸಾರಥ್ಯದಲ್ಲಿ ಸಂಭ್ರಮ ಸಡಗರದ ಸ್ವಾತಂತ್ರ್ಯೋತ್ಸವ ಆಚರಣೆ

ಹೊಸದಿಗಂತ ವರದಿ ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ 77ನೆಯ ಸ್ವಾತಂತ್ರ್ಯ ದಿನಾಚರಣೆ ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ವ್ಯಕ್ತಿಯ ಬದಲಾವಣೆಯಿಂದಲೇ ದೇಶದ ಬದಲಾವಣೆ ಸಾಧ್ಯ. ಸಮಾಜದ ಎಲ್ಲ ವರ್ಗದ ಜನರೂ ಸಹೋದರತೆ ಮತ್ತು ಸಾಮರಸ್ಯದಿಂದ ಬಾಳುತ್ತಾ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಜಾತಿ- ಮತ, ಧರ್ಮ-ಭಾಷೆ, ಮೇಲು-ಕೀಲೆಮನಬ ಭಾವನೆಗಳನ್ನು ಮೀರಿ ಸಹಬಾಳ್ವೆಯ ಜೀವನ ನಡೆಸಬೇಕು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರ ಆಶಯಗಳು ಮತ್ತು ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಸಂಕಲ್ಪ ಮಾಡಿ ಮುನ್ನಡೆಯೋಣ ಎಂದು ಸಚಿವರು ಕರೆ ನೀಡಿದರು.

ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕ್ ಗಳಲ್ಲಿ 3 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಸೀಮೆಎಣ್ಣೆಯನ್ನು 1.50ಲಕ್ಷ ಕಿಲೋ ಲೀಟರ್ ನಿಂದ 2 ಎರಡು ಲಕ್ಷ ಕಿಲೋ ಲೀಟರ್ ವರೆಗೆ ಹೆಚ್ಚಿಸುವ ರಾಜ್ಯ ಸರಕಾರದ ಪ್ರಸ್ತಾವನೆಯಿಂದ ಮೀನುಗಾರರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಇದಕ್ಕಾಗಿ 250 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭ ನುಡಿದರು.

ರಾಷ್ಟ್ರೀಯ ವಿಪತ್ತು ಉಪಶಮನಗಳ ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 5 ಜಿಲ್ಲೆಗಳಿಗೆ 721 ಕೋಟಿ ರೂಪಾಯಿ ಮೊತ್ತದಲ್ಲಿ ಭೂ ಕುಸಿತ ಹಾಗೂ ನೆರೆ ಅಪಾಯ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!