ಹೊಸದಿಗಂತ ವರದಿ ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರಿನ ನಿವಾಸಿ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.
ಅರಂಬೂರಿನ ಸರಳಿಕುಂಜ ನಿವಾಸಿ ವಿಠಲ ಎಂಬವರ ಪುತ್ರ ಪುನೀತ್ ಹಲ್ಲೆಗೊಳಗಾದ ಯುವಕ.
ಕಳೆದ ರಾತ್ರಿ ಗಂಟೆ 9.30 ರ ವೇಳೆಗೆ ಆರಂಬೂರಿನಲ್ಲಿರುವ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಏಕಾಏಕಿಯಾಗಿ ಬಂದು ತಲ್ವಾರು ಮತ್ತು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯುವಕನ ತಲೆಯ ಭಾಗಕ್ಕೆ ಏಟಾಗಿದ್ದು ಆತನನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಓರ್ವ ಆರೋಪಿ ಮನೋಜ್ ಎಂಬಾತನನ್ನು ಬೈಕ್ ಸಹಿತ ಪೋಲಿಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.