ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಬೆಟಿಯನ್ ಧರ್ಮಗುರು 14ನೇ ದಲೈಲಾಮಾ ಅವರು ಜನವರಿ 4ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಮರುದಿನ ಮೈಸೂರು ಜಿಲ್ಲೆಯ ಬೈಲಕುಪ್ಪೆಗೆ ತೆರಳಲಿದ್ದಾರೆ.
ಕರ್ನಾಟಕಕ್ಕೆ ದಲೈಲಾಮಾ ಆಗಮಿಸುತ್ತಿರುವ ವಿಷಯವನ್ನು , ಕೇಂದ್ರ ಟಿಬೆಟಿಯನ್ ಆಡಳಿತ (ಸಿಟಿಎ) ದಕ್ಷಿಣ ವಲಯದ ಮುಖ್ಯ ಪ್ರತಿನಿಧಿ ಅಧಿಕಾರಿ ಜಿಗ್ಮೆ ತ್ಸುಲ್ಟ್ರಿಮ್ ಖಚಿತ ಪಡಿಸಿದ್ದಾರೆ. ದಲೈ ಲಾಮಾ ಅವರು ಜನವರಿ 4 ರಂದು ಬೆಂಗಳೂರಿಗೆ ಆಗಮಿಸಲಿದ್ದು ಹೊರಡುವ ಮೊದಲು ಒಂದು ದಿನ ಬೆಂಗಳೂರಿನಲ್ಲಿ ತಂಗಲಿದ್ದಾರೆ. ಬೈಲಕುಪ್ಪಯಲ್ಲಿ ಅಲ್ಲಿ ಅವರು ಒಂದು ತಿಂಗಳು ತಂಗಲು ನಿರ್ಧರಿಸಲಾಗಿದೆ.
ದಲೈ ಲಾಮಾ ಅವರು ಕೊನೆಯ ಬಾರಿಗೆ 2017 ರಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಹಿಮಾಚಲ ಪ್ರದೇಶದ ಧರ್ಮಶಾಲಾ ನಂತರ ಬೈಲಕುಪ್ಪೆ ವಿಶ್ವದ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ಆಗಿದೆ, ಇದು ಟಿಬೆಟಿಯನ್ ಸರ್ಕಾರದ ಪ್ರಧಾನ ಕಛೇರಿಯೂ ಆಗಿದೆ.
“ಧರ್ಮಶಾಲಾದಲ್ಲಿ ಚಳಿಗಾಲವು ತುಂಬಾ ತೀವ್ರವಾಗಿರುತ್ತದೆ. ಹೀಗಾಗಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಬೈಲಕುಪ್ಪೆಯ ತಾಶಿ ಲುನ್ಪೋ ಮಠದಲ್ಲಿ ಕೆಲವು ಬೋಧನೆಗಳನ್ನು ನಡೆಸಬಹುದು ಎಂದು ತ್ಸುಲ್ಟ್ರಿಮ್ ಹೇಳಿದರು. 89 ವರ್ಷ ವಯಸ್ಸಿನ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ಯುಎಸ್ಎಯಲ್ಲಿ ಜೂನ್ 2024 ರಲ್ಲಿ ಮೊಣಕಾಲು ಕಸಿ ಮಾಡಿಸಿಕೊಂಡಿದ್ದರು ಮತ್ತು ಆಗಸ್ಟ್ನಲ್ಲಿ ಭಾರತಕ್ಕೆ ಮರಳಿದರು.