ಹೊಸದಿಗಂತ ವರದಿ,ಚಿತ್ರದುರ್ಗ :
ದಲಿತ ವಿದ್ಯಾರ್ಥಿನಿ ಹತ್ಯೆಗೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿನಿಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಮಂಗಳವಾರ ದೂರು ನೀಡಲಾಗಿದೆ. ಬಳಿಕ ಬುಧವಾರ ಗ್ರಾಮಾಂತರ ಠಾಣೆಗೆ ಹಾಜರಾದ ಮೃತ ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳನ್ನು ಆಕೆಯ ಪ್ರಿಯಕರ ಹೊಡೆದು ಕೊಲೆ ಮಾಡಿದ್ದಾನೆಂದು ದೂರು ನೀಡಿದ್ದಾರೆ.
ಮೃತ ವಿದ್ಯಾರ್ಥಿನಿ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ ಕೋವೇರಹಟ್ಟಿ ಗ್ರಾಮದ ನಿವಾಸಿ ವರ್ಷಿತಾ ಎಂದು ತಿಳಿದುಬಂದಿದೆ. ಇವರು ಸರ್ಕಾರಿ ಕಲಾ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದುಕೊಂಡು ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೋನೂರು ಬಳಿಯ ಎನ್.ಹೆಚ್.-೪೮ರ ಖಾಲಿ ಜಾಗದಲ್ಲಿ ಆ.೧೯ ರಂದು ಮಂಗಳವಾರ ಯುವತಿಯ ಮೃತದೇಹ ಪತ್ತೆಯಾಗಿತ್ತು.
ಇನ್ಸ್‌ಪೆಕ್ಟರ್ ಮುದ್ದುರಾಜ್, ಸಬ್‌ಇನ್ಸ್‌ಪೆಕ್ಟರ್ ಸುರೇಶ, ಡಿವೈಎಸ್‌ಪಿ ಪಿ.ಕೆ.ದಿನಕರ್ ಅವರ ನೇತೃತ್ವದಲ್ಲಿ ೪ ತಂಡಗಳನ್ನು ರಚಿಸಿ, ಶಂಕಿತನೋರ್ವನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.