ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಡ್ಯಾನ್ಸರ್ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ನವಿಲುಗರಿಗಳನ್ನು ಬಳಸಿ ಡ್ಯಾನ್ಸ್ ವಿಡಿಯೋವೊಂದನ್ನು ಮಾಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಇದೀಗ ವಿಡಿಯೋ ಸಂಬಂಧಿಸಿದಂತೆ ಕಿಶನ್ ಮಾತನಾಡಿದ್ದು, ಈ ಗರಿಗಳು ಅಂಗಡಿಯಿಂದ ಬಾಡಿಗೆ ತಂದವು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆಯಿಂದ ನೊಟೀಸ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಿಶನ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಎಲ್ಲರೂ ಕೃಷ್ಣಜನ್ಮಾಷ್ಟಮಿ ಹಾಗೂ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್‌ಗಳಲ್ಲಿ ಬಟ್ಟೆ ಹಾಗೂ ಗರಿಗಳನ್ನು ಬಾಡಿಗೆ ತಂದು ಬಳಸುತ್ತಾರಲ್ವಾ? ನಾವು ಕೂಡ ಹಾಗೇ ಮಾಡಿದ್ದು. ವಿಡಿಯೋ ಕಾನ್ಸೆಪ್ಟ್‌ಗೆ ಮ್ಯಾಚ್ ಆಗುವಂತೆ ನವಿಲುಗರಿಗಳನ್ನು ಬಾಡಿಗೆಗೆ ತಂದಿದ್ದೆವು. ಯಾವ ಪಕ್ಷಿಗೂ ವೈಯಕ್ತಿಕವಾಗಿ ಹಾನಿ ಮಾಡಿಲ್ಲ. ನವಿಲುಗರಿಗಳನ್ನು ಈ ರೀತಿ ಕಮರ್ಷಿಯಲ್ ಆಗಿ ಬಾಡಿಗೆಗೆ ನೀಡುವುದು ಅಥವಾ ಬಳಸುವುದು ಅಪರಾಧ ಎಂಬ ಕಾನೂನಿನ ಅರಿವು ನಮಗಾಗಲಿ, ನಮ್ಮ ಇಡೀ ತಂಡಕ್ಕಾಗಲಿ ಇರಲಿಲ್ಲ. ನಮಗೆ ನೋಟಿಸ್ ಬಂದ ತಕ್ಷಣ ಅಧಿಕಾರಿಗಳು ಇದರ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಜವಾಬ್ದಾರಿಯಿಂದ ನಾವು ತಕ್ಷಣವೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ ಎಂದಿದ್ದಾರೆ.



