March 23, 2026
Monday, March 23, 2026
spot_img

ಗಾಳಿಯಲ್ಲಿ ತೇಲಿ ಬಂತು ಗಂಡಾಂತರ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅದೃಷ್ಟವಶಾತ್ ತಪ್ಪಿದ ಅನಾಹುತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪದ ಸರಣಿ ಮುಂದುವರಿದಿದ್ದು, ಫೆಬ್ರವರಿ 5ರಂದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ವಿಮಾನಗಳು ಸಂಚರಿಸುವ ರನ್‌ವೇ ಪ್ರದೇಶಕ್ಕೆ ಅನಿರೀಕ್ಷಿತವಾಗಿ ಬೃಹತ್ ಬಲೂನ್ ಒಂದು ಹಾರಿಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.

ಇತ್ತೀಚೆಗಷ್ಟೇ ರನ್‌ವೇಗೆ ಬೀದಿ ನಾಯಿಗಳು ಲಗ್ಗೆಯಿಟ್ಟು ಸುದ್ದಿಯಾಗಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ. ತನಿಖೆಯ ಪ್ರಕಾರ, ಈ ಬಲೂನ್ ಬಿಸಿಡಿ ಕನ್‌ಸ್ಟ್ರಕ್ಷನ್ ಎಂಬ ಖಾಸಗಿ ಕಂಪನಿಗೆ ಸೇರಿದ್ದಾಗಿದೆ. ನಿರ್ಮಾಣ ಹಂತದ ಕಟ್ಟಡದ ಬಳಿ ಜಾಹೀರಾತಿಗಾಗಿ ಕಟ್ಟಲಾಗಿದ್ದ ಈ ಬಲೂನ್, ಗಾಳಿಯ ತೀವ್ರತೆಗೆ ದಾರ ತುಂಡಾಗಿ ನೇರವಾಗಿ ವಿಮಾನ ನಿಲ್ದಾಣದ ಸೂಕ್ಷ್ಮ ಪ್ರದೇಶಕ್ಕೆ ಹಾರಿ ಬಂದಿದೆ.

ಬಲೂನ್ ರನ್‌ವೇ ಮೇಲೆ ಬಿದ್ದ ಸಮಯದಲ್ಲಿ ಯಾವುದೇ ವಿಮಾನಗಳು ಟೇಕ್‌ಆಫ್ ಅಥವಾ ಲ್ಯಾಂಡಿಂಗ್ ಆಗುತ್ತಿರಲಿಲ್ಲ. ಒಂದು ವೇಳೆ ವಿಮಾನ ಸಂಚಾರವಿದ್ದಿದ್ದರೆ ಇಂಜಿನ್‌ ಒಳಗೆ ಬಲೂನ್ ಸಿಲುಕಿ ದೊಡ್ಡ ಮಟ್ಟದ ಸ್ಫೋಟ ಅಥವಾ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು.

ಇದನ್ನೂ ಓದಿ:

ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಬಲೂನ್ ತೆರವುಗೊಳಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಬಿಸಿಡಿ ಕನ್‌ಸ್ಟ್ರಕ್ಷನ್ ಕಂಪನಿ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !