ವೃದ್ಧ ದಂಪತಿ ಮೇಲೆ ದರ್ಪ: ಧರ್ಮಗುರು ಸಹಿತ ಇಬ್ಬರ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮದೇ ಸಮುದಾಯದ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕ್ರೈಸ್ತ ಧರ್ಮಗುರು ಸಹಿತ ಇಬ್ಬರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುಣಚ ಗ್ರಾಮದ ಮನೇಲ ಪರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಪಾದ್ರಿ ನೆಲ್ಸನ್ ಒಲಿವೆರಾ ಹಲ್ಲೆ ಆರೋಪಿ ಎನ್ನಲಾಗಿದೆ. ಇನ್ನು ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ (79) ಹಲ್ಲೆಗೊಳಗಾದವರಾಗಿದ್ದಾರೆ.

ಫೆ.29ರಂದು ಈ ಘಟನೆ ನಡೆದಿರುವುದು ವೈರಲ್ ಆಗಿರುವ ಸಿಸಿಟಿವಿ ಕ್ಯಾಮರಾದ ವೀಡಿಯೊದಿಂದ ತಿಳಿದುಬರುತ್ತದೆ. ಪಾದ್ರಿ ನೆಲ್ಸನ್ ಒಲಿವೆರಾ ಮನೆ ಆಶೀರ್ವಾದಕ್ಕೆ ತೆರಳಿದ ವೇಳೆ ಮನೆಯ ಹೊರಗೆ ವೃದ್ಧ ದಂಪತಿ ಜೊತೆ ವಾಗ್ವಾದ ನಡೆಸಿದ ಬಳಿಕ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಪತಿಯ ರಕ್ಷಣೆಗೆ ಮುಂದಾದ ಮಹಿಳೆಗೆಯ ಮೇಲೆಯೂ ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧರ್ಮ ಗುರುಗಳು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದು, ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡಿ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ವೃದ್ಧನ ಕಾಲರ್ ಹಿಡಿದು ಮಾರು ದೂರ ಎಳೆದುಕೊಂಡು ಹೋಗಿ ಹೊಡೆದಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾದ್ರಿ ನೆಲ್ಸನ್ ಒಲಿವೆರಾ ಮತ್ತು ಕಾರು ಚಾಲಕ ಅಲ್ಫಾನ್ಸ್ ಮೊಂತೆರೋ ವಿರುದ್ದ ಹಲ್ಲೆ, ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ.

ಧರ್ಮಗುರುಗಳ ಮೇಲೆ ಶಿಸ್ತು ಕ್ರಮ
ಪರಿಯಾಲ್ತಡ್ಕ ಮಣಿಲ ಚರ್ಚ್ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ಮಂಗಳೂರು ಧರ್ಮಪ್ರಾಂತ್ಯ ತೀವ್ರವಾಗಿ ಖಂಡಿಸುತ್ತದೆ ಮತ್ತು ಸಮಗ್ರ ತನಿಖೆಯನ್ನು ಕೈಗೊಳ್ಳಲಿದೆ. ದೇಶದ ಕಾನೂನು ಸುವ್ಯವಸ್ತೆಗೆ ಬರುವ ಕಾರಣದಿಂದ ತನಿಖೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ. ತಕ್ಷಣದಿಂದ ಜಾರಿಗೆ ಬರುವಂತೆ ಧರ್ಮಗುರುಗಳನ್ನು ಧಾರ್ಮಿಕ ಸೇವೆಯಿಂದ ತೆಗೆದುಹಾಕಲಾಗುತ್ತದೆ. ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಬೇರೆಯವರನ್ನು ನಿಯೋಜಿಸಲಾಗುವುದು ಎಂದು ಪ್ರಕಟಣೆಯನ್ನು ಮಂಗಳೂರು ಧರ್ಮಪ್ರಾಂತ್ಯ ಹೊರಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!