ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ . ಇತ್ತ ಪರ-ವಿರೋಧಗಳ ಚರ್ಚೆ ಕೂಡ ನಡೆಯುತ್ತಿದೆ.
ಈ ನಡುವೆ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಘಟನೆ ಬಗ್ಗೆ ತಮ್ಮ ಆಘಾತ ವ್ಯಕ್ತಪಡಿಸಿದ್ದಾರೆ.
‘ನಮಸ್ಕಾರ’ ಎಂದು ತಮ್ಮ ನೋಟ್ ಅನ್ನು ಆರಂಭಿಸಿರುವ ಅವರು ‘ಇದನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭವಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆʼ ಎಂದು ಹೇಳಿದ್ದಾರೆ.
‘ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ’ ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ.
ರಚಿತಾ ರಾಮ್ ಮತ್ತು ದರ್ಶನ್ ʼಬುಲ್ಬುಲ್ʼ, ʼಅಂಬರೀಷʼ, ʼಕ್ರಾಂತಿʼ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. 2013ರಲ್ಲಿ ತೆರೆಕಂಡ ʼಬುಲ್ಬುಲ್ʼ ಚಿತ್ರದ ಮೂಲಕ ರಚಿತಾ ರಾಮ್ ಸಿನಿರಂಗಕ್ಕೆ ಪರಿಚಿತರಾಗಿದ್ದರು.