ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾಗೌಡ ಹಾಗೂ ದರ್ಶನ್ ಜಾಮೀನು ಅರ್ಜಿ ವಜಾಗೊಂಡಿದ್ದು, ಇದರ ಬೆನ್ನಲ್ಲೇ ನ್ಯಾಯಾಂಗ, ಪೊಲೀಸ್ ಇಲಾಖೆ ಮೇಲೆ ನಮಗೆ ನಂಬಿಕೆ, ಗೌರವ ಇದೆ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಪವಿತ್ರಾಗೌಡ ಹಾಗೂ ಎ2 ದರ್ಶನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೋಮವಾರ ವಜಾ ಗೊಳಿಸಿದೆ. ಈ ಕುರಿತು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶಿನಾಥಯ್ಯ, ಎಸ್‌ಪಿಪಿ ಪ್ರಸನ್ನ ಅವರಿಂದ ಉತ್ತಮ ವಾದ ಮಂಡನೆ ಆಗಿದೆ. ಆರೋಪಿಗಳ ಜಾಮೀನು ಅರ್ಜಿ ವಜಾ ಆಗಿದೆ. ನ್ಯಾಯಾಂಗದ ಮೇಲೆ ಗೌರವವಿದೆ. ಜಾಮೀನು ಅರ್ಜಿ ವಜಾಗೊಳಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಆರೋಪಿಗಳಿಗೆ ಶಿಕ್ಷೆ ಬಗ್ಗೆ ಕೋರ್ಟ್ ಸೂಕ್ತ ತೀರ್ಮಾನ ಮಾಡಲಿದೆ ಎಂದು ಹೇಳಿದರು.