ಹೊಸ ದಿಗಂತ ವರದಿ, ಮಂಡ್ಯ :
ಮದ್ದೂರಿನ ದಲಿತ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿ ಕಾಮಾಂಧ ಆರೋಪಿಗಳಿಗೆ ಕಠಿಣವಾದ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮದ್ದೂರಿನ ಲಿಖಿತ್ ಲಾಡ್ಜ್‌ನಲ್ಲಿ ಕಳೆದ ನ. 4ರಂದು 17 ವರ್ಷ ವಯಸ್ಸಿನ ದಲಿತ ವಿದ್ಯಾರ್ಥಿನಿಯೋರ್ವಳನ್ನು ಪುಸಲಾಯಿಸಿ ಜೂಸ್‌ನಲ್ಲಿ ಮತ್ತಿನ ಗುಳಿಗೆ ಹಾಕಿ, ನಾಲ್ಕು ಕಾಮಾಂಧ ಯುವಕರು ಗ್ಯಾಂಗ್ ರೇಪ್ ಮಾಡಿರುವ ಸ್ನೇಹ ವಂಚನೆಯ ಅಮಾನವೀಯವಾದ ಅತ್ಯಾಚಾರ ಪ್ರಕರಣವನ್ನು ಖಂಡಿಸಿದರು.
ಗ್ಯಾಂಗ್‌ರೇಪ್ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಬೇಕು. ಕಾಮಾಂಧ ಆರೋಪಿಗಳಿಗೆ ಕಠಿಣವಾದ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಆರೋಪಿಗಳಾದ ಪುನೀತ, ಮಂಜುನಾಥ, ಸಿದ್ದರಾಜು, ಕಳ್ಳಿಮೆಳೆದೊಡ್ಡಿ ಇವರಲ್ಲದೆ ಎಫ್‌ಐಆರ್‌ನಲ್ಲಿ ಕೈಬಿಟ್ಟಿರುವ ಭರತ್ ಕಳ್ಳಿಮೆಳೆದೊಡ್ಡಿ ಎಂಬ ಆರೋಪಿಯನ್ನೂ ಈ ಕೂಡಲೇ ಬಂಧಿಸಿ ತನಿಖೆ ನಡೆಸಿ, ಕಠಿಣವಾದ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಅಪ್ರಾಪ್ತ ದಲಿತ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಪ್ರಮುಖ ಕಾರಣರಾಗಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಮದ್ದೂರಿನ ಲಿಖಿತ್ ಲಾಡ್ಜ್ ಮಾಲೀಕರು ಮತ್ತು ಸಿಬ್ಬಂದಿಗಳನ್ನು ಆರೋಪಿಗಳನ್ನಾಗಿಸಿ, ಈ ಕೂಡಲೇ ಬಂಧಿಸಬೇಕು. ಕೂಡಲೇ ಲಾಡ್ಜ್‌ನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಮುದಾಯದ ಮೇಲಿನ ದೌರ್ಜನ್ಯ ಘಟಿಸಿದಾಗ ಸರ್ಕಾರದ ಸಚಿವರು ಸಂತ್ರಸ್ಥರ ಮನೆ ಬಾಗಿಲಿಗೆ ಹೋಗಿ ಸಂತೈಸುವುದಲ್ಲದೆ, ಅಗತ್ಯ ಕಾನೂನು ಕ್ರಮದಲ್ಲಿನ ವೈಫಲ್ಯಗಳನ್ನು ಪರಿಶೀಲಿಸಿ, ಅಗತ್ಯ ಕ್ರಮದ ಸೂಚನೆ ನೀಡುವುದಾಗಿ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಆದೇಶಿಸಬೇಕು. ಈ ಪ್ರಕರಣದ ಸಂತ್ರಸ್ಥ ದಲಿತ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪುನರ್ ವಸತಿ ಕಲ್ಪಿಸಿ, ನ್ಯಾಯ ಮತ್ತು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡರಾದ ಅನಿಲ್‌ಕುಮಾರ್, ಕೆ.ಎಂ. ಶ್ರೀನಿವಾಸ್, ಬಿ. ಆನಂದ, ನಾಗರಾಜು ರಾಮಕೃಷ್ಣ, ಸೋಮಶೇಖರ್, ಹರಿಕುಮಾರ್, ಬಿ.ಎಂ. ಸೋಮಶೇಖರ್, ಬಲರಾಮಣ್ಣ, ಭಾಗ್ಯಮ್ಮ, ಗೀತಾ ಸುಕನ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.