Monday, January 12, 2026

ದತ್ತ ಜಯಂತಿ ಸಿದ್ಧತೆ: ಚಿಕ್ಕಮಗಳೂರಲ್ಲಿ 4 ದಿನ ಕಟ್ಟೆಚ್ಚರ, ಜಿಲ್ಲಾಡಳಿತದ ಸೂಚನೆಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾಡಳಿತವು ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಮುಖ ನಿರ್ಬಂಧಗಳು:

ವಾರದ ಸಂತೆಗೆ ನಿಷೇಧ: ಡಿ. 3ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆಯ ಕಾರಣ, ಚಿಕ್ಕಮಗಳೂರು ನಗರದಲ್ಲಿ ವಾರದ ಸಂತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಗರ ಬಂದ್: ದತ್ತ ಜಯಂತಿ ಪ್ರಮುಖ ದಿನವಾದ ಡಿ. 4ರಂದು ದತ್ತ ಪಾದುಕೆ ದರ್ಶನದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಸ್ವಯಂಪ್ರೇರಿತ ‘ಬಂದ್’ ಆಚರಿಸುವಂತೆ ಜಿಲ್ಲಾಡಳಿತವು ಅಂಗಡಿ-ಮುಂಗಟ್ಟು ಮಾಲೀಕರಿಗೆ ಸೂಚನೆ ನೀಡಿದೆ.

ಪ್ರವಾಸಿಗರ ನಿರ್ಬಂಧ: ಇಂದು (ಡಿ. 1) ರಿಂದ ಡಿ. 5ರ ಬೆಳಗ್ಗೆ 10 ಗಂಟೆಯವರೆಗೂ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಜಿಲ್ಲಾಡಳಿತವು ಪೊಲೀಸರ ಜೊತೆಗೆ 15ಕ್ಕೂ ಹೆಚ್ಚು ಡ್ರೋನ್ ಕ್ಯಾಮರಾಗಳನ್ನು ಭದ್ರತಾ ಬಂದೋಬಸ್ತ್‌ಗಾಗಿ ಬಳಸಿಕೊಳ್ಳುತ್ತಿದೆ. ವಿವಿಧ ಸ್ಥಳಗಳಲ್ಲಿ ಒಟ್ಟು 28 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಹಗಲು-ರಾತ್ರಿ ನಿರಂತರ ಕಣ್ಗಾವಲು ಇರಲಿದೆ.

ದತ್ತಪೀಠದ ಒಳಗೆ ಫೋಟೋ ತೆಗೆಯುವುದು ಹಾಗೂ ವೀಡಿಯೊ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ದತ್ತ ಜಯಂತಿಯ ಪ್ರಮುಖ ದಿನವಾದ ಡಿ. 4ರಂದು ಬೆಳಗ್ಗೆ 6 ಗಂಟೆಯಿಂದ ಭಕ್ತರಿಗೆ ದತ್ತಪೀಠಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಮಧ್ಯಾಹ್ನ 2 ಗಂಟೆಯ ನಂತರ ಪೀಠಕ್ಕೆ ಪ್ರವೇಶ ಇರುವುದಿಲ್ಲ.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಈಗಾಗಲೇ ಸ್ಪಷ್ಟಪಡಿಸಿರುವಂತೆ, ಸುಪ್ರೀಂ ಕೋರ್ಟ್‌ನ ನಿರ್ದೇಶನ ಮತ್ತು ಮಾರ್ಗಸೂಚಿಗಳ ಅನುಸಾರವೇ ಈ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ, ಭಕ್ತಾದಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!