ಹೊಸದಿಗಂತ ವರದಿ ಚಿಕ್ಕಮಗಳೂರು:
ನಗರದ ಶಂಕರ ಮಠದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡುವ ಮೂಲಕ ಸಂಘಟನೆಯಯ 20 ನೇ ವರ್ಷ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸಂಘಟನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ರೆಡ್ಡಿ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಅಘೋರಿ ವಿವೇಕನಾಥ್ ಜಿ, ಯೋಗೀಶ್ ಸಂಜಿತ್ ಸುವರ್ಣ ಸೇರಿ 50 ಕ್ಕೂ ಹೆಚ್ಚು ಮಂದಿ ಮಾಲೆ ಧರಿಸಿದರು. ಶಂಕರ ಮಠದಲ್ಲಿ ದತ್ತಾತ್ರೇಯರಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಕೀರ್ತನೆಗಳನ್ನು ಹಾಡಲಾಯಿತು. ಶ್ರೀಮಠದ ಅರ್ಚಕರು ಮಾಲೆ ತೊಡಿಸಿದರು.
ನವೆಂಬರ್ 2 ರಂದು ರಾಜ್ಯಾದ್ಯಂತ ದೀಪೋತ್ಸವ ನಡೆಯಲಿದ್ದು, ನವೆಂಬರ್ 4 ರಂದು ಪಡಿ ಸಂಗ್ರಹ ಹಾಗೂ ನವೆಂಬರ್ 5 ರಂದು ಚಿಕ್ಕಮಗಳೂರು ನಗರದಲ್ಲಿ ಮಾಲಾಧಾರಿಗಳ ಶೊಭಾಯಾತ್ರೆ, ಅದೇ ದಿನ ದತ್ತಪೀಠದಲ್ಲಿ ಪಾದುಕೆಗಳ ಪೂಜೆ, ಹೋಮ, ಹವನ, ಧಾರ್ಮಿಕ ಸಭೆಯೊಂದಿಗೆ ಅಭಿಯಾನ ಸಂಪನ್ನಗೊಳ್ಳಲಿದೆ.
ಶಾಖಾದ್ರಿ ವಿರುದ್ಧ ಆಕ್ರೋಶ
ಬಾಬಾಬುಡನ್ ಶಾಖಾದ್ರಿ ಅವರು ಚಿರತೆ ಚರ್ಮ, ಜಿಂಕೆ ಚರ್ಮ ಇಟ್ಟುಕೊಂಡು ಸಿಕ್ಕಿಬಿದ್ದಿದ್ದಾರೆ. ದತ್ತಪೀಠದ ಹೆಸರನ್ನು ಉಪಯೋಗಿಸಿಕೊಂಡು ಈ ರೀತಿ ಅವ್ಯವಹಾರ, ವನ್ಯಜೀವಿಗಳನ್ನು ಹತ್ಯೆ ಮಾಡುತ್ತಿದ್ದಾರೆ. ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿ ಪವಿತ್ರ ಪೀಠದಲ್ಲಿರಲು ಹಿಂದೂ ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಶಾಖಾದ್ರಿ ಕುಟುಂಬವನ್ನು ಹೊರಕ್ಕೆ ಹಾಕಬೇಕು ಎಂದು ಒತ್ತಾಯಿಸುತ್ತೇವೆ. ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ, ಅಲ್ಲಿ ಅನೈತಿಕ, ಅಕ್ರಮವಾಗಿ ಶಾಖಾದ್ರಿ ವಾಸ ಮಾಡುತ್ತಿದ್ದಾರೆ. ಅಲ್ಲಿ ಬರುವ ಹಿಂದೂ ಭಕ್ತರಿಗೆ ಇದು ಬಾಬಾಬುಡನ್ ದರ್ಗಾ ಎಂದು ಹೇಳುತ್ತಾ ದಿಕ್ಕು ತಪ್ಪಿಸುತ್ತಿದ್ದಾರೆ. ಶಾಖಾದ್ರಿ ಅಲ್ಲಿ ಇದ್ದಷ್ಟು ದಿನ ಹಿಂದೂ ಸಮಾಜಕ್ಕೆ ಕಂಟಕವಾಗುತ್ತದೆ. ಅವರು ಕೋಮು ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.