ಶಾಂತಿಯುತವಾಗಿ ದತ್ತಮಾಲಾ ಅಭಿಯಾನ ಸಂಪನ್ನ

ಹೊಸದಿಗಂತ ವರದಿ,ಚಿಕ್ಕಮಗಳೂರು:

ನೂರಾರು ಮಾಲಾಧಾರಿಗಳಿಂದ ಶೋಭಾ ಯಾತ್ರೆ ಹಾಗೂ ಪೀಠದಲ್ಲಿ ದತ್ತ ಪಾದುಕೆಗಳ ದರ್ಶನ, ಹೋಮ, ಹವನಗಳೊಂದಿಗೆ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ೨೦ ನೇ ವರ್ಷದ ದತ್ತಮಾಲಾ ಅಭಿಯಾನ ಶಾಂತಿಯುತವಾಗಿ ಸಂಪನ್ನಗೊಂಡಿತು.

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ವಿವಿಧ ಮುಖಂಡರು, ಸ್ವಾಮೀಜಿಗಳು ಬೆಳಗ್ಗೆ ನಗರದ ಬಸವನಹಳ್ಳಿ ಶ್ರೀ ಶಂಕರ ಮಠದ ಶಾರದಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಯೇ ರಸ್ತೆ ಮಧ್ಯೆ ಬಹಿರಂಗ ಸಭೆಯನ್ನೂ ನಡೆಸಿದರು.
ನಂತರ ಮಾಲಾಧಾರಿಗಳ ಶೋಭಾಯಾತ್ರೆ ಆರಂಭಗೊಂಡಿತು. ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರೊಂದಿಗೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಲ್ಲಂಪುರ ದತ್ತಾಶ್ರಯದ ಅರ್ಚಕರಾದ ರಾಜೇಂದ್ರ ಕುಮಾರ್, ಸಮಸ್ಥ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನಂನ ಯೋಗಿ ಸಂಜಿತ್ ಸುವರ್ಣ, ಅಘೋರಿ ವಿವೇಕನಾತ್ ಜಿ, ಸೇರಿದಂತೆ ಸಂಘಟನೆಯ ಇತರೆ ಮುಖಂಡರು ಮೆರವಣಿಗೆ ಮುಂಚೂಣಿಯಲ್ಲಿ ಹೆಜ್ಜೆ ಹಾಕಿದರು.

ಶಂಕರಮಠದಿಂದ ಹನುಮಂತಪ್ಪ ವೃತ್ತ, ಎಂಜಿ ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ಆಜಾದ್ ಮೈದಾನದಲ್ಲಿ ಮುಕ್ತಾಯಗೊಂಡಿತು. ಅಲ್ಲಿಂದ ವಿವಿಧ ವಾಹನಗಳನ್ನೇರಿದ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದರು.

ಪೀಠದಲ್ಲಿ ಸರತಿಯಲ್ಲಿ ಸಾಗಿದ ಭಕ್ತಾಧಿಗಳು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ ಪಡಿಯನ್ನು ಅರ್ಪಿಸಿ ಗುಹೆಯಲ್ಲಿ ಪಾದುಕೆಗಳ ದರ್ಶನ ಮಾಡಿದರು. ಅರ್ಚಕರು ದತ್ತಪಾದುಕೆಗಳಿಗೆ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ವಿತರಿಸಿದರು. ನಂತರ ಪೀಠದ ಆವರಣದಲ್ಲೇ ನಡೆದ ಗಣ ಹೋಮ, ದತ್ತ ಹೋಮದ ಪೂರ್ಣಾಹುತಿ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಹಿಂದಿರುಗಿದರು.
ಶ್ರೀರಾಮ ಸೇನೆ ಜಿಲ್ಲಾದ್ಯಕ್ಷ ರಂಜಿತ್ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ಶೆಟ್ಟಿ ಅಡ್ಯಾರ್, ಕಾರ್ಯದರ್ಶಿ ರಾಜು ಖಾನಪ್ಪನವರ, ಶಾರೀರಿಕ ಪ್ರಮುಖ ಮಹೇಶ್ ರೋಕಡೆ, ಬಸವರಾಜ ಗಾಯಕ್‌ವಾಡ್, ವಿವಿಧ ಜಿಲ್ಲೆಯ ಅಧ್ಯಕ್ಷರುಗಳು, ಚಿಕ್ಕಮಗಳೂರು ವಿಭಾಗ ಅಧ್ಯಕ್ಷ ರಂಜಿತ್ ಶೆಟ್ಟಿ, ರಾಜ್ಯದ ವಿವಿಧ ವಿಭಾಗಾಧ್ಯಕ್ಷರು, ಚಿಕ್ಕಮಗಳೂರು ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ನವೀನ ರಂಜಿತ್, ಬೆಂಗಳೂರು ನಗರ ಮಹಿಳಾ ಅಧ್ಯಕ್ಷೆ ನಂದಿನಿ ರಾಜ್ ಇತರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!