ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ಇಂಟರ್ನ್‍ಶಿಪ್‌ಗೆ ಅಂತ ಹೊರಟ ಮಗಳನ್ನ ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಬಂದ ತಂದೆ ಕಣ್ಣೆದುರೇ ಮಗಳು ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯ ಅಂಭಾಭವಾನಿ ಹೋಟೆಲ್ ಬಳಿ ಘಟನೆ ನಡೆದಿದ್ದು, 22 ವರ್ಷದ ಯೋಗಿತಾ ಮೃತ ದುರ್ದೈವಿ. ಅಂದಹಾಗೆ ಹಾಸನದ ಕಾಲೇಜಿನಲ್ಲಿ ಪಶು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಯೋಗಿತಾ, ಅಂತಿಮ ವರ್ಷ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದಳು.
ಪ್ರತಿ ದಿನ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಸ್ ಮೂಲಕ ಪ್ರಯಾಣ ಮಾಡುತ್ತಿದ್ದು, ಬಸ್ ನಿಲ್ದಾಣಕ್ಕೆ ತಂದೆ ಬೈಕ್ ಮೂಲಕ ಡ್ರಾಪ್ ಮಾಡುತ್ತಿದ್ರು. ಅದರಂತೆ ತಮ್ಮ ಮಗಳನ್ನ ಡ್ರಾಪ್ ಮಾಡುವಾಗ ಅಂಭಾಭವಾನಿ ಹೋಟೆಲ್ ಮುಂಭಾಗ ಕ್ಯಾಂಟರ್‌ಗೆ ಅಡ್ಡ ಬಂದ ಪಾದಚಾರಿ ತಪ್ಪಿಸಲು ಕ್ಯಾಂಟರ್ ಚಾಲಕ ಸೈಡಿಗೆ ಎಳೆದಿದ್ದು ಈ ವೇಳೆ ಬೈಕ್‌ಗೆ ಕ್ಯಾಂಟರ್ ಟಚ್ ಆಗಿ ಬೈಕ್ ಕೆಳಗೆ ಉರುಳಿದೆ. ಈ ವೇಳೆ ಬೈಕ್‌ನ ಹಿಂಬದಿ ಕೂತಿದ್ದ ಯೋಗಿತಾ ನೆಲಕ್ಕೆ ಬಿದ್ದಿದ್ದು ತಲೆಗೆ ಗಂಭೀರವಾದ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆಕೆ ಚಿಕಿತ್ಸೆ ಮಧ್ಯೆ ಪ್ರಾಣ ಬಿಟ್ಟಿದ್ದಾಳೆ.