March 22, 2026
Sunday, March 22, 2026
spot_img

ಅತ್ತೆ ಕಾಟಕ್ಕೆ ದೇವರ ಮೊರೆ ಹೋದ ಸೊಸೆ: ಹುಂಡಿಯಲ್ಲಿ ಸಿಕ್ಕಿತು 110 ರೂಪಾಯಿ ‘ಡೀಲ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ತೆ-ಸೊಸೆಯ ಜಗಳ ಬೀದಿಗಿಳಿಯುವುದು ಸಾಮಾನ್ಯ, ಆದರೆ ರಾಯಭಾಗದ ಖಣದಾಳ ಗ್ರಾಮದಲ್ಲಿ ಇದು ದೇವಸ್ಥಾನದ ಹುಂಡಿ ಏರಿದೆ! ಇಲ್ಲಿನ ಪ್ರಸಿದ್ಧ ಶ್ರೀ ಹುಲಿಕಾಂತೇಶ್ವರ ದೇವಸ್ಥಾನದ ಹುಂಡಿಯಲ್ಲಿ ಮಹಿಳೆಯೊಬ್ಬಳು ಬರೆದ ವಿಚಿತ್ರ ಚೀಟಿಯೊಂದು ಈಗ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ದೇವಸ್ಥಾನದ ಸಮಿತಿಯವರು ಹುಂಡಿಯ ಹಣ ಎಣಿಕೆ ಮಾಡುವ ಸಂದರ್ಭದಲ್ಲಿ, 100 ರೂ. ಮತ್ತು 10 ರೂ. ಮುಖಬೆಲೆಯ ನೋಟುಗಳ ನಡುವೆ ಮಡಚಿಟ್ಟಿದ್ದ ಒಂದು ಬಿಳಿ ಹಾಳೆ ಪತ್ತೆಯಾಗಿದೆ. ಕುತೂಹಲದಿಂದ ಅದನ್ನು ಬಿಡಿಸಿ ನೋಡಿದ ಸಮಿತಿ ಸದಸ್ಯರಿಗೆ ಅಕ್ಷರಶಃ ಆಘಾತ ಕಾದಿತ್ತು.

ಅತ್ತೆಯ ಕಾಟದಿಂದ ಬೇಸತ್ತಿರುವ ಸೊಸೆಯೊಬ್ಬಳು ತನ್ನ ನೋವನ್ನು ದೇವರಿಗೆ ಪತ್ರದ ಮೂಲಕ ತೋಡಿಕೊಂಡಿದ್ದಾಳೆ. “ದೇವರೇ ನನ್ನ ಕಷ್ಟ ದೂರ ಮಾಡು, ಮುಂದಿನ ವರ್ಷದ ಜಾತ್ರೆ ಬರುವಷ್ಟರಲ್ಲಿ ನಮ್ಮ ಅತ್ತೆ ಸತ್ತು ಹೋಗಲಿ” ಎಂದು ಆಕೆ ಮನವಿ ಮಾಡಿದ್ದಾಳೆ.

ಸಾಮಾನ್ಯವಾಗಿ ಭಕ್ತರು ದೇವರಿಗೆ ಹಣ, ಆರೋಗ್ಯ, ಸುಖ-ಶಾಂತಿ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ, ಈ ಸೊಸೆ ಮಾತ್ರ ತನ್ನ ಸಂಸಾರದ ಕಿರಿಕಿರಿ ತಪ್ಪಿಸಲು ಸಾಕ್ಷಾತ್ ದೇವರಿಗೇ ‘ಅತ್ತೆಯ ಸಾವಿನ’ ಹರಕೆ ಹೊತ್ತಿರುವುದು ವಿಪರ್ಯಾಸವೇ ಸರಿ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, “ಸಂಸಾರದ ಜಗಳ ದೇವರಿಗೂ ಬಿಟ್ಟಿಲ್ಲ” ಎಂಬ ಮಾತುಗಳು ಕೇಳಿಬರುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !