ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾಷೆಯ ವಿಚಾರಕ್ಕೆ ಸಂಬಂಧಿಸಿದ ಅತೀವ ಅಮಾನವೀಯ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಮರಾಠಿ ಭಾಷೆ ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ತಾಯಿಯೇ ತನ್ನ ಆರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
30 ವರ್ಷದ ಮಹಿಳೆ, ಮಗಳ ಸಾವನ್ನು ಹೃದಯಾಘಾತ ಎಂದು ತೋರಿಸಲು ಆರಂಭದಲ್ಲಿ ಪ್ರಯತ್ನಿಸಿದ್ದಳು. ಆದರೆ ಘಟನೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಸೂಚಿಸಿದರು. ಪೋಸ್ಟ್‌ಮಾರ್ಟಂ ವರದಿಯಲ್ಲಿ ಉಸಿರುಗಟ್ಟಿದ ಪರಿಣಾಮ ಮಗು ಮೃತಪಟ್ಟಿರುವುದು ಬಹಿರಂಗವಾಯಿತು. ಬಳಿಕ ನಡೆದ ಕಟ್ಟುನಿಟ್ಟಿನ ವಿಚಾರಣೆಯಲ್ಲಿ ತಾಯಿಯೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.
ಘಟನೆ ನಡೆದ ದಿನ ಮಗುವಿನ ಅಜ್ಜಿ ಮನೆಗೆ ಬಂದಿದ್ದರೂ ಮೊಮ್ಮಗಳನ್ನು ನೋಡದೇ ಹಿಂದಿರುಗಿದ್ದರು. ಸಂಜೆ ಪತಿ ಮನೆಗೆ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ವೇಳೆ ತಾಯಿ ಹೃದಯಾಘಾತ ಎಂದೇ ಹೇಳಿಕೆ ನೀಡುತ್ತಿದ್ದಳು.
ಪೊಲೀಸರ ಮಾಹಿತಿ ಪ್ರಕಾರ, ವಿಜ್ಞಾನ ಪದವೀಧರೆಯಾದ ಮಹಿಳೆ ಐಟಿ ಎಂಜಿನಿಯರ್ ಪತಿಯನ್ನು 2017ರಲ್ಲಿ ವಿವಾಹವಾಗಿದ್ದಳು. ಮಗು ಚಿಕ್ಕ ವಯಸ್ಸಿನಿಂದಲೇ ಮಾತಿನ ಸಮಸ್ಯೆ ಎದುರಿಸುತ್ತಿದ್ದು, ಹೆಚ್ಚಾಗಿ ಹಿಂದಿ ಮಾತನಾಡುತ್ತಿದ್ದಳು. ಇದರಿಂದ ಮಹಿಳೆ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ.

