ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣದಲ್ಲಿರುವ ಖಾಸಗಿ ಡೇಕೇರ್ ಕೇಂದ್ರದಲ್ಲಿ 15 ತಿಂಗಳ ಹೆಣ್ಣು ಮಗುವಿನ ಮೇಲೆ ಹಲ್ಲೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆ. 4 ರಂದು ತಾಯಿ ಮಗುವನ್ನು ಡೇಕೇರ್‌ನಿಂದ ಮನೆಗೆ ಕರೆದುಕೊಂಡು ಬಂದಾಗ, ಮಗು ನಿರಂತರವಾಗಿ ಅಳುತ್ತಿತ್ತು, ಬಟ್ಟೆ ಬದಲಾಯಿಸುವಾಗ ತೊಡೆಯ ಮೇಲೆ ವೃತ್ತಾಕಾರದ ಕಚ್ಚಿದ ಗುರುತುಗಳನ್ನು ಪೋಷಕರು ಗಮನಿಸಿದರು.
ಗಾಬರಿಗೊಂಡ ಪೋಷಕರು ಮಗುವನ್ನು ತಕ್ಷಣವೇ ವೈದ್ಯರ ಬಳಿ ಕರೆದೊಯ್ಯಲು, ಪರೀಕ್ಷೆಯ ವೇಳೆ ಮಗುವಿಗೆ ಯಾರೋ ಕಚ್ಚಿರುವುದು ದೃಢಪಟ್ಟಿತು. ನಂತರ ಪೋಷಕರು ಡೇಕೇರ್ ಕೇಂದ್ರಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಮಹಿಳಾ ಸಿಬ್ಬಂದಿಯೊಬ್ಬರು ಮಗುವನ್ನು ನೆಲಕ್ಕೆ ಎಸೆದಿರುವುದು, ಕೆನ್ನೆಗೆ ಹೊಡೆದಿರುವುದು, ಕಚ್ಚಿರುವುದು ಹಾಗೂ ಪ್ಲಾಸ್ಟಿಕ್ ಬ್ಯಾಟ್‌ನಿಂದ ಹೊಡೆದಿರುವ ಘಟನೆಗಳು ಬೆಳಕಿಗೆ ಬಂದಿದೆ.
ಪೋಷಕರ ದೂರಿನ ಆಧಾರದ ಮೇಲೆ ನೋಯ್ಡಾ ಸೆಕ್ಟರ್-142 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಡೇಕೇರ್ ಮುಖ್ಯಸ್ಥರು ಮಗುವನ್ನು ಸಮಾಧಾನಪಡಿಸಲು ಅಥವಾ ಹಲ್ಲೆಯಿಂದ ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲವೆಂದು, ಬದಲಾಗಿ ಮಗುವಿಗೆ ನಿಂದನೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಬೆಳಕಿಗೆ ಬಂದಿದೆ.