‘ಶಕ್ತಿ’ ಯೋಜನೆ ಉದ್ಘಾಟನೆಯಲ್ಲಿ ಗಮನ ಸೆಳೆದ ಡಿಕೆಶಿ ಪೇಟಾ-ಶಾಲು

ಹೊಸದಿಂಗತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ಘೋಷಿಸಿದ್ದ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿದರು. ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಎಂಬ ‘ಶಕ್ತಿ’ ಯೋಜನೆ ಇಂದಿನಿಂದ ಜಾರಿಗೆ ಬಂದಿದೆ. ಈ ಯೋಜನೆ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ವಿಧಾನ ಸೌಧ ಎದುರು ದೊಡ್ಡಮಟ್ಟದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಕಾಂಗ್ರೆಸ್​ನ ಹಲವು ಗಣ್ಯರು, ಸಚಿವರು, ಶಾಸಕರು ಉಪಸ್ಥಿತರಿದ್ದರು.

ಈ ಶಕ್ತಿ ಯೋಜನೆ ಉದ್ಘಾಟನೆಯ ಎಲ್ಲ ಕಾರ್ಯಕ್ರಮಗಳು, ಪ್ರಮುಖರ ಭಾಷಣಗಳ ಮಧ್ಯೆ ಅತಿ ಹೆಚ್ಚು ಗಮನಸೆಳೆದಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೇಷ-ಭೂಷಣ. ಅವರು ಇಂದು ಎಂದಿನಂತೆ ಬಿಳಿ ಪೈಜಾಮ, ನಿಲುವಂಗಿ ಧರಿಸುವ ಜತೆಗೆ ಒಂದು ಪೇಟಾ (ಟೊಪ್ಪಿ)ವನ್ನು ಹಾಕಿಕೊಂಡು ಬಂದಿದ್ದರು. ಹಾಗೇ ತಿಳಿ ಹಳದಿ ಬಣ್ಣದ ವಿಶೇಷ ಶಾಲನ್ನು ಹೆಗಲ ಮೇಲೆ, ಕುತ್ತಿಗೆ ಬಳಸಿ ಹಾಕಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬರುವಾಗ ಈ ಪೇಟಾ ಧರಿಸಿ ಬಂದವರು ಇಡೀ ಕಾರ್ಯಕ್ರಮದುದ್ದಕ್ಕೂ ಅದನ್ನು ತೆಗೆದಿಲ್ಲ. ಬಸ್​ನಲ್ಲಿ ಪ್ರಯಾಣ ಮಾಡುವಾಗಲೂ ತಲೆ ಮೇಲೆ ಹಾಗೇ ಇತ್ತು. ಹಳದಿ, ನೀಲಿ ಮತ್ತು ಆಕಾಶ ನೀಲಿ ಬಣ್ಣ ಮಿಶ್ರಿತ ಈ ಪೇಟಾ ಡಿಕೆಶಿ ತಲೆ ಮೇಲೆ ಕೂತು ಗಮನ ಸೆಳೆಯುತ್ತಿತ್ತು. ಇನ್ನು ಅವರು ಧರಿಸಿದ್ದ ಶಾಲಿನ ಮೇಲೆ ತ್ರಿಶೂಲದ ಚಿತ್ರ ಇದ್ದಿದ್ದು ಕೂಡ ಕುತೂಹಲ ಹುಟ್ಟಿಸಿದೆ. ಸಾಮಾನ್ಯವಾಗಿ ಡಿ.ಕೆ.ಶಿವಕುಮಾರ್​ ಹೀಗೆಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪೇಟಾವನ್ನು ಧರಿಸುವುದಿಲ್ಲ. ಆದರೆ ಇವತ್ಯಾಕೆ ಹೀಗೆ ಬಂದರು ಎಂಬುದೇ ಅನೇಕರ ಪ್ರಶ್ನೆಯಾಗಿತ್ತು.

ಏನು ಈ ಪೇಟಾ ಗುಟ್ಟು?
ಡಿ.ಕೆ.ಶಿವಕುಮಾರ್ ಎರಡು ದಿನಗಳ ಉಜ್ಜಿಯಿನಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಸ್ಮಾರತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದೇವಸ್ಥಾನದ ವತಿಯಿಂದ ಡಿ.ಕೆ.ಶಿವಕುಮಾರ್​ಗೆ ಈ ಪೇಟಾ ತೊಡಿಸಿ, ಶಾಲು ಹಾಕಿದ್ದಾರೆ. ಮಹಾಕಾಳೇಶ್ವರ ದೇಗುಲದಲ್ಲಿ, ಗೌರವಾರ್ಥವಾಗಿ, ಆಶೀರ್ವಾದ ಪೂರ್ವಕವಾಗಿ ಕೊಟ್ಟ ಪೇಟಾ-ಶಾಲನ್ನು ಇಂದು ಡಿ.ಕೆ.ಶಿವಕುಮಾರ್ ಹಾಕಿಕೊಂಡು ಬಂದಿದ್ದರು. ದೈವಭಕ್ತರಾಗಿರುವ ಡಿ.ಕೆ.ಶಿವಕುಮಾರ್​ ಆಗಾಗ್ಗೆ ದೇಗುಲಗಳು, ಮಠಗಳಿಗೆ ಭೇಟಿ ಕೊಟ್ಟು ಪ್ರಾರ್ಥಿಸುತ್ತಾರೆ. ಹಾಗೇ ಉಪಮುಖ್ಯಮಂತ್ರಿಯಾದ ಬಳಿಕ ಅವರು ಮೊದಲ ಬಾರಿಗೆ ಉಜ್ಜಯನಿಗೆ ಭೇಟಿ ಕೊಟ್ಟಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದು, ಐದು ಗ್ಯಾರಂಟಿಗಳಲ್ಲಿ ಮೊದಲನೇಯದನ್ನು ಇಂದು ಅನುಷ್ಠಾನಕ್ಕೆ ತಂದಿದೆ. ಇದೊಂದು ಮಹತ್ವದ ಸಂದರ್ಭವಾಗಿರುವುದರಿಂದ ಆ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ತಮಗೆ ನೀಡಲಾದ ಪೇಟಾವನ್ನು ಧರಿಸಿಬಂದಿದ್ದಾರೆ. ಮಾಧ್ಯಮದವರೆದುರು ಮಾತನಾಡುತ್ತ ಇದೇ ವಿಷಯವನ್ನು ಅವರು ಪ್ರಸ್ತಾಪಿಸಿದರು. ನಾನು ಎರಡು ದಿನ ಉಜ್ಜಯಿನಿ ಪ್ರವಾಸದಲ್ಲಿ ಇದ್ದೆ. ಮಹಾಕಾಳೇಶ್ವರನ ದರ್ಶನ ಪಡೆದಿದ್ದೇನೆ. ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!