ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ನ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ರನ್ ಹೊಳೆ ಹರಿಸಿದೆ .
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಕಾಂಗರೂಗಳ ಬೌಲರ್ಗಳ ದಾಳಿಯ ಹೊರತಾಗಿಯೂ ಉತ್ತಮ ರನ್ ಕಲೆ ಹಾಕಿತು.
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಶತಕ ಮತ್ತು ಐಡೆನ್ ಮಾರ್ಕ್ರಾಮ್ ಅರ್ಧ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 311 ರನ್ ಸಂಗ್ರಹಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 312 ರನ್ ಬೇಕು.
106 ಎಸೆತಗಳಲ್ಲಿ 5 ಸಿಕ್ಸ್, 8 ಬೌಂಡರಿ ಸಹಿತ 109 ರನ್ ಗಳಿಸಿದರು. ಆದರೆ, ಅವರೊಂದಿಗೆ ಕಣಕ್ಕಿಳಿದಿದ್ದ ನಾಯಕ ತೆಂಬಾ ಬವುಮಾ ಹೆಚ್ಚು ನಿಲ್ಲದೇ ಮತ್ತೆ ನಿರಾಸೆ ಮೂಡಿಸಿದರು. 55 ಎಸೆತ ಎದುರಿಸಿದ ತೆಂಬಾ, 2 ಬೌಂಡರಿ ಸಹಿತ ಕೇವಲ 35 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಮೊದಲ ಬಲಿಯಾದರು.
ರಾಸ್ಸಿ ವ್ಯಾನ್ ಡೆರ್ ಡುಸೆನ್ ಕೂಡ ಕ್ವಿಂಟನ್ಗೆ ಸಾಥ್ ನೀಡುವಲ್ಲಿ ವಿಫಲರಾದರು. 30 ಬಾಲ್ ಆಡಿದ ರಾಸ್ಸಿ, ಕೇವಲ 26 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಈ ಘಳಿಗೆಯಲ್ಲಿ ಶತಕ ಫೂರ್ಣಗೊಳಿಸಿದ್ದ ಕ್ವಿಂಟನ್, ತಂಡದ ಮೊತ್ತ 197 ರನ್ ಆದಾಗ 34.5ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿ ತಮ್ಮ ಆಟಕ್ಕೆ ಫುಲ್ ಸ್ಟಾಪಿಟ್ಟರು. ಡಿಕಾಕ್ ಔಟಾದ ಬಳಿಕ ಅಬ್ಬರಿಸಿದ ಐಡೆನ್ ಮರ್ಕ್ರಾಮ್, ಆಕರ್ಷಕ ಅರ್ಧಶತಕ ಸಿಡಿಸಿದ ಬಳಿಕ ಪೆವಿಲಿಯನ್ ಸೇರಿಕೊಂಡರು. 44 ಎಸೆತದಲ್ಲಿ 1 ಸಿಕ್ಸ್, 7 ಬೌಂಡರಿ ಸಹಿತ ಐಡೆನ್ ಮಾರ್ಕ್ರಾಮ್, 56 ರನ್ ಕಲೆ ಹಾಕಿ ತಂಡದ ಮೊತ್ತವನ್ನು ಗರಿಷ್ಠ ಮಟ್ಟಕ್ಕೆ ತಂದು ನಿಲ್ಲಿಸಿದರು.