ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ: ನೇಪಾಳ ಮೂಲದ ಜೋಡಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನಗರದ ದಯಾನಂದ ಸಾಗರ ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಇಬ್ಬರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಮೃತ ಕುಮಾರಿ (21) ಹಾಗೂ ಸುರೇಂದ್ರ ಮೆಹ್ರಾ (22) ಎಂದು ಗುರುತಿಸಲಾಗಿದೆ. ನ.24ರಂದು ದಯಾನಂದ ಸಾಗರ ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ಆಗ ತಾನೆ ಹುಟ್ಟಿದ ಮಗುವನ್ನ ಟಾಯ್ಲೆಟ್ ಕಮೋಡ್‍ಗೆ ಹಾಕಿ ಆರೋಪಿಗಳು ಫ್ಲಶ್ ಮಾಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ಶೌಚಾಲಯ ಬ್ಲಾಕ್ ಆಗಿದ್ದ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚಗುಂಡಿಯಲ್ಲಿ ಮಗು ಪತ್ತೆಯಾಗಿತ್ತು. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಗೆ ದಯಾನಂದ ಸಾಗರ ಆಸ್ಪತ್ರೆ ವೈದ್ಯರು ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾರೋಹಳ್ಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕ ಹಾಗೂ ಯುವತಿ ಕಳೆದ ಎರಡು ವರ್ಷಗಳಿಂದ ಮದುವೆ ಆಗದೇ ಜೊತೆಯಲ್ಲಿ ವಾಸವಾಗಿದ್ದರು. ಗರ್ಭಿಣಿ ಆಗಿದ್ದ ಯುವತಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಟಾಯ್ಲೆಟ್‍ನಲ್ಲಿ ಮಗು ಜನಿಸಿದೆ. ಬಳಿಕ ಇಬ್ಬರೂ ಸೇರಿ ಯಾರಿಗೂ ತಿಳಿಯದಂತೆ ಟಾಯ್ಲೆಟ್ ಕಮೋಡ್‍ಗೆ ಮಗು ಹಾಕಿ ಫ್ಲಶ್ ಮಾಡಿ ಎಸ್ಕೇಪ್ ಆಗಿದ್ದರು.

ಪೋಲೀಸರು ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here