ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಲಮುರಿ ಮತ್ತು ಎಡಮುರಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಪ್ರದೇಶಗಳಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಇವು ಅಪಾಯಕಾರಿ ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ.
ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗಿದೆ. ಕಳೆದ 7-8 ವರ್ಷಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಇಲ್ಲಿ ಜಲಸಮಾಧಿಯಾಗಿದ್ದು, ಕಳೆದ ಎರಡು ತಿಂಗಳಲ್ಲೇ ನಾಲ್ವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರಸ್ತುತ ಬೇಸಿಗೆ ರಜೆಯ ಕಾರಣದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಮುಖ್ಯವಾಗಿ ಮಕ್ಕಳು ಮತ್ತು ಯುವಕರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಹೆಚ್ಚಿನ ಸಾವು-ನೋವುಗಳನ್ನು ತಡೆಗಟ್ಟುವ ಉದ್ದೇಶದಿಂದ ಮುಂಜಾಗೃತಾ ಕ್ರಮವಾಗಿ ಮಂಡ್ಯ ಜಿಲ್ಲಾಡಳಿತವು ಮುಂದಿನ ಆದೇಶದವರೆಗೆ ಈ ಎರಡು ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸಾರ್ವಜನಿಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.



