March 5, 2026
Thursday, March 5, 2026
spot_img

ನೆಟ್‌ವರ್ಕ್‌ ಹುಡುಕಾಟ ತಂದಿಟ್ಟ ಮೃತ್ಯು: 17ನೇ ಮಹಡಿಯಿಂದ ಬಿದ್ದು IOC ಅಧಿಕಾರಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಬೈಲ್ ನೆಟ್‌ವರ್ಕ್‌ ಹುಡುಕುತ್ತಾ ಕಟ್ಟಡದ ಬಾಲ್ಕನಿಗೆ ಬಂದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ 17ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನೋಯ್ಡಾದ ಸೆಕ್ಟರ್ 104ರಲ್ಲಿ ನಡೆದಿದೆ.

ಮೃತರನ್ನು ದೆಹಲಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅಜಯ್ ಗರ್ಗ್ ಎಂದು ಗುರುತಿಸಲಾಗಿದೆ. ಇವರು ಸೆಕ್ಟರ್ 104ರ ‘ಎಟಿಎಸ್ ಒನ್ ಹ್ಯಾಮ್ಲೆಟ್’ ಸೊಸೈಟಿಯ 17ನೇ ಮಹಡಿಯ ಫ್ಲಾಟ್‌ನಲ್ಲಿ ಪತ್ನಿಯೊಂದಿಗೆ ವಾಸವಿದ್ದರು. ಮೂಲತಃ ಉತ್ತರ ಪ್ರದೇಶದ ಕಾನ್ಪುರದವರಾದ ಇವರ ಪುತ್ರ ಮುಂಬೈನಲ್ಲಿ ನೆಲೆಸಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಜಯ್ ಗರ್ಗ್ ಅವರಿಗೆ ಮೊಬೈಲ್ ಕರೆ ಬಂದಾಗ ಫ್ಲಾಟ್ ಒಳಗೆ ನೆಟ್‌ವರ್ಕ್ ಸಮಸ್ಯೆ ಎದುರಾಗಿತ್ತು. ಸರಿಯಾದ ಸಿಗ್ನಲ್‌ಗಾಗಿ ಮಾತನಾಡುತ್ತಲೇ ಬಾಲ್ಕನಿ ಅಥವಾ ಗ್ಯಾಲರಿಯತ್ತ ಹೆಜ್ಜೆ ಹಾಕಿದ ಅವರು, ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದು ಕೇವಲ ಅಪಘಾತವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !