ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯನೂರು–ಹಾರನಹಳ್ಳಿ ರಸ್ತೆಯಲ್ಲಿ ಬೆಳಗಿನ ಜಾವ ಎರಡು ಬೈಕುಗಳು ಪರಸ್ಪರ ಡಿಕ್ಕಿ ಹೊಡೆದುಇಬ್ಬರು ಯುವಕರು ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿದ ಬಂದ ಟ್ರ್ಯಾಕ್ಟರ್ ಇಬ್ಬರ ಮೇಲೆ ಹರಿದು ಹೋಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೃತರನ್ನು ಮಲ್ಲಾಪುರ ಗ್ರಾಮದ ಆಕೀಬ್ (25) ಮತ್ತು ಚಾಂದ್ ಪೀರ್ (18) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿ ಪ್ರಕಾರ, ಎದುರು ಮುಖವಾಗಿ ಬಂದ ಎರಡು ಬೈಕುಗಳು ಡಿಕ್ಕಿಯಾಗಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಚಾಲಕ ಮತ್ತು ಹಿಂಬದಿ ಸವಾರ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್ ಬ್ರೇಕ್ ಹಾಕುವಷ್ಟರಲ್ಲೇ ರಸ್ತೆ ಮೇಲಿದ್ದ ಯುವಕರ ಮೇಲೆ ಹರಿದಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

