ಕೊಪ್ಪದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾವು: ಪ್ರಾಂಶುಪಾಲೆ, ವಾರ್ಡನ್‌ ಅಮಾನತು

ಹೊಸ ದಿಗಂತ ವರದಿ, ಚಿಕ್ಕಮಗಳೂರು :

ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಅಸಹಜವಾಗಿ ಸಾವಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ವಸತಿ ಶಾಲೆಯ ಪ್ರಾಂಶುಪಾಲೆ ಮತ್ತು ವಾರ್ಡನ್‌ರನ್ನು ಅಮಾನತು ಪಡಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶಿಸಿದ್ದಾರೆ.

ಪ್ರಾಂಶುಪಾಲೆ ರಜನಿ ಮತ್ತು ಪ್ರಭಾರಿ ವಾರ್ಡನ್ ಸುಂದರ ನಾಯ್ಕ್ ಅಮಾನತುಗೊಂಡವರಾಗಿದ್ದಾರೆ. ಇದೇ ಜೂನ್ ೨೯ ರಂದು ಶಮಿತಾ ಎಂಬ ೯ ನೇ ತರಗತಿ ವಿದ್ಯಾರ್ಥಿನಿ ಸ್ನಾನಗೃಹದ ಬಾಗಿಲ ಕಬ್ಬಿಣದ ಪಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ಸ್ಥಳದಲ್ಲಿ ೨೦೨೩ ರ ಜುಲೈ ೨೭ ರಂದು ಅಮೂಲ್ಯ ಎಂಬ ೯ ನೇ ತರಗತಿ ವಿದ್ಯಾರ್ಥಿನಿಯ ಶವ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿತ್ತು.

ಶಮಿತಾ ಅಸಹಜ ಸಾವಿನ ಪ್ರಕರಣವು ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಒಂದೇ ವಸತಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರ ಅಸಹಜ ಸಾವು ಸಂಭವಿಸಿರುವ ಬಗ್ಗೆ ತನಿಖೆ ನಡೆಸಬೇಕು, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.

ಶಮಿತ ಸಾವು ಪ್ರಕರಣದ ನಂತರ ಶಾಲೆಗೆ ಭೇಟಿ ನೀಡಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ನಿರ್ದೇಶಕರು ನೀಡಿರುವ ವರದಿಯನ್ನಾಧರಿಸಿ ಪ್ರಾಂಶುಪಾಲರು ಮತ್ತು ವಾರ್ಡನ್‌ರನ್ನು ಅಮಾನತು ಪಡಿಸಲಾಗಿದೆ.

ಇದೇ ವೇಳೆ ವಿದ್ಯಾರ್ಥಿನಿಯರಾದ ಶಮಿತಾ ಮತ್ತು ಅಮೂಲ್ಯರ ಅಸಹಜ ಸಾವಿನ ಪ್ರಕರಣಗಳ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆಯೂ ಕ್ರೈಸ್ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶಿಸಿದ್ದಾರೆ.

ನಿವೃತ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಧೀಶೆ ಶೋಭಾ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಜಿಲ್ಲಾ ಸಮನ್ವಯ ಅಧಿಕಾರಿ ಶೈಲಾ ಅವರನ್ನ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!