ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು: ಮತ್ತೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರೋಧಿ ನಾಮ ಸಂವತ್ಸರದಲ್ಲಿ ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗುತ್ತದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ .

ಧಾರವಾಡದಲ್ಲಿ ಮಾತನಾಡಿದ ಅವರು, ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡಕು ಹೆಚ್ಚು ಎನ್ನಬಹುದು. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ. ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನು ಅನ್ನೋದನ್ನು ಶ್ರಾವಣದಲ್ಲಿ ಹೇಳುವೆ ಎಂದು ಹೇಳಿದ್ದಾರೆ.

ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ, ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ. ಅದೆಲ್ಲದರ ಬಗ್ಗೆ ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಎಂದು ಶ್ರಾವಣದಲ್ಲಿ ಹೇಳುವೆ ಎಂದು ಸ್ಪಷ್ಟಪಡಿಸಿದರು.

ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕಟ್ ಮಾಡಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಸಂಸತ್ ಪ್ರವೇಶ ಮಾಡುತ್ತಾಳೆ. ಆದರೆ ದುರ್ಯೋಧನನ ತೊಡೆ ಮುರಿಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಎಂದು ಮಾರ್ಮಿಕವಾಗಿ ನುಡಿದ ಕೋಡಿಶ್ರೀ, ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ ಎಂದು ಆಘಾತಕಾರಿ ಭವಿಷ್ಯವಾಣಿ ನುಡಿದರು.

ಕರೆಯದೆ ಬರುವವುದು ಕೋಪ. ಬರೆಯದೇ ಓದುವವನು ಕಣ್ಣು. ಬರಗಾಲಿನಲ್ಲಿ ನಡೆಯುವವನ ಮನಸ್ಸು. ಈ ಮೂರು ನಿಯಂತ್ರಣದಲ್ಲಿಡಬೇಕು. ದುಡ್ಡು, ಅಧಿಕಾರ ಮುಖ್ಯ ಎಂದು ಹೊರಟಿದ್ದಾರೆ. ಅಧಃಪತನಕ್ಕೆ ಇದೇ ಕಾರಣವಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!