ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಬ್ರಿಟಿಷರ ಕಾಲದ ಕಾನೂನುಗಳಾದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸಿದ್ದಾರೆ.
ಮಸೂದೆಯಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಗುಂಪು ಹಿಂಸಾಚಾರಕ್ಕೆ ಮರಣದಂಡನೆ ಶಿಕ್ಷೆ ವಿಧಿಸುವುದನ್ನುಪ್ರಸ್ತಾಪಿಸಲಾಗಿದೆ. ಅಲ್ಲದೇ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸುವ ಮಸೂದೆಯನ್ನು ಅಮಿತ್ ಶಾ ಮಂಡಿಸಿದ್ದಾರೆ.
ವಿವಾದಾತ್ಮಕ ದೇಶದ್ರೋಹ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಬಂಧನೆಯನ್ನು ಮಸೂದೆ ಹೊಂದಿದೆ. ಮಸೂದೆಯು IPCಯನ್ನು ಬದಲಿಸುವ ಗುರಿಯನ್ನು ಹೊಂದಿದೆ ಎಂದು ಅಮಿತ್ ಶಾ ಸಂಸತ್‌ನಲ್ಲಿ ಹೇಳಿದ್ದಾರೆ.
ಅದೇ ರೀತಿ ಅಪರಾಧದ ತೀವ್ರತೆಗೆ ಅನುಗುಣವಾಗಿ ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆ, ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದರೆ ಒಂದು ವರ್ಷ ಜೈಲು ಶಿಕ್ಷೆ, ಸಾಮೂಹಿಕ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ, ಅಪ್ರಾಪ್ತೆಯರ ಅತ್ಯಾಚಾರಕ್ಕೆ ಮರಣದಂಡನೆ ಅಂಶಗಳನ್ನು ಮಸೂದೆ ಒಳಗೊಂಡಿದೆ.