ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಇಂದು ಮೂರು ಹೊಸ ಮಸೂದೆಗಳು ಅಂಗೀಕಾರವಾಗಿದೆ. ಭಾರತೀಯ ನ್ಯಾಯ (ಎರಡನೇ) ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ)-2023 ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ಮೂರು ಕಾನೂನುಗಳು ಭಯೋತ್ಪಾದನೆಯ ಸ್ಪಷ್ಟ ವ್ಯಾಖ್ಯಾನ ಹೊಂದಿವೆ. ದೇಶದ್ರೋಹಕ್ಕೆ ‘ರಾಷ್ಟ್ರದ ವಿರುದ್ಧ ಅಪರಾಧಗಳು’ ಎಂಬ ಹೊಸ ವ್ಯಾಖ್ಯಾನ ನೀಡುತ್ತವೆ ಎಂದರು.
ಮೂರು ವಿಧೇಯಕಗಳನ್ನು ಸಮಗ್ರ ಸಮಾಲೋಚನೆಯ ನಂತರವೇ ರೂಪಿಸಲಾಗಿದೆ. ಅಂಗೀಕಾರಕ್ಕಾಗಿ ಸದನದ ಮುಂದೆ ತರುವ ಮುನ್ನ ಕರಡು ಶಾಸನಗಳ ಪ್ರತಿ ಅಲ್ಪವಿರಾಮ ಮತ್ತು ಪೂರ್ಣ ವಿರಾಮವನ್ನೂ ಓದಲಾಗಿದೆ. ಅಸ್ತಿತ್ವದಲ್ಲಿದ್ದ ಕಾನೂನುಗಳು ನ್ಯಾಯ ನೀಡುವ ಉದ್ದೇಶ ಹೊಂದದೇ ಶಿಕ್ಷೆ ವಿಧಿಸುವ ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದ್ದವು. ಮೂರು ಹೊಸ ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆ ಸ್ಥಾಪಿಸಲು ಪ್ರಯತ್ನಿಸುತ್ತವೆ. ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಅದರ ಸಂಕೇತಗಳಿಂದ ಮುಕ್ತಗೊಳಿಸುತ್ತವೆ ಎಂದು ಶಾ ಹೇಳಿದರು.
ಇದೇ ಮೊದಲ ಬಾರಿಗೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಮಾನವ ಸ್ಪರ್ಶ ಹೊಂದಿದೆ. ಹಳೆಯ ಕಾನೂನುಗಳು ಸೆಕ್ಷನ್ 375-376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ಪಟ್ಟಿ ಮಾಡಿದ್ದವು. ಹೊಸ ಮಸೂದೆಯು ಸೆಕ್ಷನ್ 63ರ ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳ ಪಟ್ಟಿ ಮಾಡಿದೆ. ಕೊಲೆ ಪ್ರಕರಣವು ಸೆಕ್ಷನ್ 302ರ ಬದಲಿಗೆ ಸೆಕ್ಷನ್ 101, ಅಪಹರಣ ಪ್ರಕರಣವು ಸೆಕ್ಷನ್ 359 ಬದಲು ಈಗ ಸೆಕ್ಷನ್ 136ರಡಿ ಸೇರಿಸಲಾಗಿದೆ. ಈ ಮಸೂದೆಗಳು ಗುಂಪು ಹತ್ಯೆಗೆ ಮರಣದಂಡನೆ ಶಿಕ್ಷೆ ಒದಗಿಸುತ್ತವೆ ಎಂದು ವಿವರಿಸಿದರು.
ವರ್ಷಗಳ ಕಾಲ ‘ತಾರೀಖ್ ಪೇ ತರೀಖ್’ ಮುಂದುವರಿಯುತ್ತದೆ. ಪೊಲೀಸರು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಸರ್ಕಾರವು ಪೊಲೀಸ್ ಮತ್ತು ನ್ಯಾಯಾಂಗವನ್ನು ಹೊಣೆ ಮಾಡುತ್ತದೆ. ಪೊಲೀಸರು ಮತ್ತು ನ್ಯಾಯಾಂಗವು ವಿಳಂಬಕ್ಕೆ ಸರ್ಕಾರವನ್ನು ಹೊಣೆ ಮಾಡುತ್ತದೆ. ಈಗ ನಾವು ಹೊಸ ಕಾನೂನುಗಳಲ್ಲಿ ಹಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದೇವೆ ಎಂದರು.
ನಾನು ಉದ್ದೇಶಿತ ಕ್ರಿಮಿನಲ್ ಕಾನೂನುಗಳ ಪ್ರತಿ ಸಾಲನ್ನು ಓದಿದ್ದೇನೆ. ಸಿಆರ್ಪಿಸಿಯಲ್ಲಿ 484 ಸೆಕ್ಷನ್ಗಳಿದ್ದವು, ಈಗ ಅದರಲ್ಲಿ 531 ಸೆಕ್ಷನ್ಗಳಿವೆ. 177 ವಿಭಾಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು 9 ಹೊಸ ವಿಭಾಗಗಳನ್ನು ಸೇರಿಸಲಾಗಿದೆ, 39 ಹೊಸ ಉಪವಿಭಾಗಗಳನ್ನು ಸೇರಿಸಲಾಗಿದೆ. 44 ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಆರೋಪಿಗಳಿಗೆ ಖುಲಾಸೆಗಾಗಿ ಅರ್ಜಿ ಸಲ್ಲಿಸಲು ಏಳು ದಿನಗಳ ಕಾಲಾವಕಾಶವಿದೆ. ನ್ಯಾಯಾಧೀಶರು ಆ ಏಳು ದಿನಗಳಲ್ಲಿ ವಿಚಾರಣೆಯನ್ನು ನಡೆಸಬೇಕು ಮತ್ತು ಗರಿಷ್ಠ 120 ದಿನಗಳಲ್ಲಿ ಪ್ರಕರಣವು ವಿಚಾರಣೆಗೆ ಬರಲಿದೆ. ಈ ಹಿಂದೆ ಮನವಿಯ ಚೌಕಾಸಿಗೆ ಯಾವುದೇ ಕಾಲಮಿತಿ ಇರಲಿಲ್ಲ. ಈಗ ಅಪರಾಧ ನಡೆದ 30 ದಿನಗಳೊಳಗೆ ಅವರ ಅಪರಾಧವನ್ನು ಒಪ್ಪಿಕೊಂಡರೆ ಶಿಕ್ಷೆಯು ಕಡಿಮೆ ಇರುತ್ತದೆ. ವಿಚಾರಣೆಯ ಸಮಯದಲ್ಲಿ ದಾಖಲೆಗಳನ್ನು ಹಾಜರುಪಡಿಸಲು ಯಾವುದೇ ಅವಕಾಶವಿರಲಿಲ್ಲ. ಎಲ್ಲಾ ದಾಖಲೆಗಳನ್ನು30 ದಿನಗಳ ಒಳಗೆ ಹಾಜರುಪಡಿಸುವುದನ್ನು ನಾವು ಕಡ್ಡಾಯಗೊಳಿಸಿದ್ದೇವೆ. ಅದರಲ್ಲಿ ಯಾವುದೇ ವಿಳಂಬ ಮಾಡಲಾಗುವುದಿಲ್ಲ ಎಂದರು.