ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನ ಸಭೆ ಚುನಾವಣೆಗೆ ರಾಷ್ಟ್ರ ರಾಜಧಾನಿ ಸಕಲ ಸಿದ್ದತೆಯಲ್ಲಿದ್ದು, ಈ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ, AAP ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಲು ಖಲಿಸ್ತಾನಿ ಉಗ್ರರು ಸಂಚು ರೂಪಿಸಿದ್ದಾರೆ ಎಂಬುದಾಗಿ ಗುಪ್ತಚರ ವರದಿಗಳು ಹೇಳಿವೆ.
ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ದೇವರು ನನ್ನನ್ನು ಕಾಪಾಡುತ್ತಾನೆ. ದೇವರು ಎಲ್ಲಿಯವರೆಗೂ ಬದುಕಿಸುತ್ತಾನೋ ಅಲ್ಲಿಯವರೆಗೂ ಇರುತ್ತೇನೆ ಎಂದಿದ್ದಾರೆ.
ಫೆಬ್ರವರಿ 5 ರಂದು ನಡೆಯಲಿರುವ ಚುನಾವಣೆಗೆ ದೆಹಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ದೇವರು ಕಾಪಾಡುತ್ತಾನೆ ಎಂದರು. ನಾಮಪತ್ರಕ್ಕೂ ಮುನ್ನಾ ಕನ್ನಾಟ್ ನ ಪ್ರಾಚೀನ ಹನುಮಂತನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಾತನಾಡಿದ ಅವರು, ದೇವರಿಂದ ರಕ್ಷಿಸಲ್ಪಟ್ಟವರನ್ನು ಯಾರೂ ಹತ್ಯೆ ಮಾಡಲು ಸಾಧ್ಯವಿಲ್ಲ. ದೇವರು ನನ್ನೊಂದಿಗೆ ಇದ್ದಾನೆ ಎಂದರು.
ಜೀವಸೆಲೆ ಇರುವವರೆಗೂ ಬದುಕುತ್ತೇವೆ. ಜೀವಸೆಲೆ ಕೊನೆಯದಾಗ ದೇವರು ಕರೆಯುತ್ತಾನೆ. ಆಗ ಎಲ್ಲರೂ ಹೋಗಬೇಕಾಗುತ್ತದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಹೇಳಿದರು.
ಪಂಜಾಬ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಎರಡರಿಂದ ಮೂವರು ಖಲಿಸ್ತಾನಿ ಉಗ್ರರು ರಾಜಧಾನಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ದೆಹಲಿ ಮಾರ್ಗದಲ್ಲಿ ಸಾಗುತ್ತಿದೆ ಎಂದು ಗುಪ್ತಚರ ವರದಿಗಳು ಹೇಳಿವೆ.