Sunday, September 28, 2025

ವಿಜಯ್ ರ‍್ಯಾಲಿಯಲ್ಲಿ ಮರಣ ಮೃದಂಗ: 39ಕ್ಕೆ ದಾಟಿದ ಮೃತರ ಸಂಖ್ಯೆ, 48 ಮಂದಿಗೆ ಚಿಕಿತ್ಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿ ಭೀಕರ ದುರಂತಕ್ಕೆ ಕಾರಣವಾಗಿದೆ. ಶನಿವಾರ ತಮಿಳಿಗ ವಿಟ್ರಿ ಕಳಗಂ ಪಕ್ಷದ ನಾಯಕ ಹಾಗೂ ನಟ ದಳಪತಿ ವಿಜಯ್ ನಡೆಸಿದ ರ‍್ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಜನಸಂದಣಿ ನಿಯಂತ್ರಣ ತಪ್ಪಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ 6 ಮಕ್ಕಳು ಸೇರಿದಂತೆ ಸಾವನ್ನಪ್ಪಿದವರ ಸಂಖ್ಯೆ ಒಟ್ಟು 39 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇನ್ನೂ 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯ್ ಅವರ ಜನಪ್ರಿಯತೆಯಿಂದಾಗಿ ಸುಮಾರು 60 ಸಾವಿರ ಜನರು ಈ ರ‍್ಯಾಲಿಗೆ ಆಗಮಿಸಿದ್ದರು ಎನ್ನಲಾಗಿದೆ. ವಿಜಯ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆಯಿಂದ ಜನ ನುಗ್ಗಿದ್ದರಿಂದ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.

ಈ ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವಾರು ನಾಯಕರು ಸಂತಾಪ ಸೂಚಿಸಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದಾಗಿ ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ಸಮಿತಿ ರಚಿಸಲಾಗಿದೆ.

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂಥ ದೊಡ್ಡ ಕಾಲ್ತುಳಿತ ದುರಂತ ಮೊತ್ತಮೊದಲ ಬಾರಿಗೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಈ ದುರಂತಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕೆಂಬ ಅಭಿಪ್ರಾಯವು ವ್ಯಕ್ತವಾಗಿದೆ.