ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಈ ವಾರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ ಗುರುವಾರದಂದು 74ಕ್ಕೆ ಏರಿಕೆಯಾಗಿದೆ.
ಶಿಮ್ಲಾದ ಶಿವ ದೇವಾಲಯ ಕುಸಿತದ ಅವಶೇಷಗಳಿಂದ ಮತ್ತೊಂದು ಮೃ ದೇಹವನ್ನು ಹೊರತೆಗೆಯಲಾಗಿದ್ದು, ಚಂಬಾದಲ್ಲಿ ಇನ್ನಿಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮ್ಮರ್ ಹಿಲ್‌ನಲ್ಲಿರುವ ಶಿವ ದೇವಾಲಯದಲ್ಲಿ ಸಂಭವಿಸಿದ ಭೂಕುಸಿತ ಸೇರಿದಂತೆ ಶಿಮ್ಲಾದಲ್ಲಿ ಮೂರು ಪ್ರಮುಖ ಭೂಕುಸಿತಗಳಿಂದಾಗಿ 21 ಮಂದಿ ಸಾವನ್ನಪ್ಪಿದ್ದಾರೆ.
ಮುಂಗಾರು ಆರಂಭವಾದ 55 ದಿನಗಳಲ್ಲಿ ರಾಜ್ಯದಲ್ಲಿ 113 ಭೂಕುಸಿತಗಳು ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) 2,491 ಕೋಟಿ ರೂ. ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) 1,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಶಿಮ್ಲಾ, ಸೋಲನ್, ಮಂಡಿ, ಚಂಬಾ ಮತ್ತು ಪಕ್ಕದ ಪ್ರದೇಶಗಳಲ್ಲಿನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಭಾನುವಾರದಿಂದ ಆರಂಭವಾಗಿ ಸತತ ಮೂರು ದಿನಗಳ ಕಾಲ ಭಾರಿ ಮಳೆಯಾಗಿದೆ. ಮಂಗಳವಾರದ ನಂತರ ಮಳೆ ಕಡಿಮೆಯಾಗಿದ್ದು, ಗುರುವಾರ ಕೆಲವೆಡೆ ತುಂತುರು ಮಳೆಯಾಗಿದೆ.