ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು‌ ಹರಿಸಲು ನಿರ್ಧಾರ

ಹೊಸದಿಗಂತ ವರದಿ, ಕುಶಾಲನಗರ:

ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ರೈತರು‌ ಮತ್ತು ಜನ-ಜಾನುವಾರುಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಹಾರಂಗಿ ಜಲಾಶಯದಿಂದ ಮುಂದಿನ 15 ದಿನಗಳವರೆಗೆ ಪ್ರತಿನಿತ್ಯ 1500 ಕ್ಯುಸೆಕ್ ನೀರನ್ನು ನದಿ ಮತ್ತು ಕಾಲುವೆಗಳಿಗೆ ಹರಿಸಲು ಭಾನುವಾರ ನಡೆದ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ನೀರಾವರಿ‌ ನಿಗಮದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾನುವಾರದಿಂದಲೇ ನೀರು ಹರಿಸಲು ತೀರ್ಮಾನಿಸಲಾಯಿತಲ್ಲದೆ, ಮುಂದಿನ 15 ದಿನಗಳ ಬಳಿಕ 15 ದಿನ ನೀರು ಸ್ಥಗಿತಗೊಳಿಸಲಾಗುವುದು.  ತದನಂತರದ 15 ದಿನಗಳ ಕಾಲ ಕಟ್ಟು ಪದ್ಧತಿಯಲ್ಲಿ ನೀರು ಹರಿಬಿಡಲು ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು.

ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ನೀರಿನ‌ ಅಭಾವ ಉಂಟಾಗಿರುವ ಕಾರಣ ರೈತರು, ಜನ-ಜಾನುವಾರುಗಳಿಗೆ ನೀರು ಹರಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಬೋಸರಾಜು, ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಎ.ಮಂಜು, ರವಿಶಂಕರ್, ಎಂಎಲ್ಸಿ ಮರಿತಿಬ್ಬೇಗೌಡ, ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ, ಎಸ್ಪಿ ರಾಮರಾಜನ್, ಸಿಇಒ ವರ್ಣಿತ್‌ ನೇಗಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಕೆ.ಕೆ.ರಘುಪತಿ, ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಸೇರಿದಂತೆ ಹಾಸನ,‌ ಮೈಸೂರು, ಕೊಡಗು ಜಿಲ್ಲೆಯ ನೀರಾವರಿ ನಿಗಮ, ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!