ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೋಮವಾರ ಕ್ರೀಡೆಯಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.
31 ವರ್ಷದ ಅಥ್ಲೀಟ್ ಭಾವನಾತ್ಮಕ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಬಹಿರಂಗ ಮಾಡಿದ್ದಾರೆ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಮತ್ತು ಭಾರತೀಯ ಜಿಮ್ನಾಸ್ಟಿಕ್ಸ್ ಅನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಸಾಹಸದೊಂದಿಗೆ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ.
‘ಮ್ಯಾಟ್‌ನಿಂದ ಹೊರಹೋಗುತ್ತಿದ್ದೇನೆ! ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು. ಮುಂದಿನ ಅಧ್ಯಾಯಕ್ಕೆ ಕಾತರಳಾಗಿದ್ದೇನೆ’ ಅವರು ತಮ್ಮ ನಿವೃತ್ತಿಯ ಪ್ರಕಟಣೆಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ಭಾವುಕ ಪೋಸ್ಟ್‌ನಲ್ಲಿ, ದೀಪಾ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗಿಯಿಂದ ಪ್ರಸಿದ್ಧ ಕ್ರೀಡಾಪಟುವಿನವರೆಗೆ ತನ್ನ ಪ್ರಯಾಣವನ್ನು ತಿಳಿಸಿಕೊಟ್ಟಿದ್ದಾರೆ. ಐದು ವರ್ಷದ ದೀಪಾಗೆ ತನ್ನ ಚಪ್ಪಟೆ ಪಾದದಿಂದಾಗಿ ಜಿಮ್ನಾಸ್ಟ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದು ನನಗೆ ಇನ್ನೂ ನೆನಪಿದೆ ಎಂದು ಅವರು ಬರೆದಿದ್ದಾರೆ. ಆದರೆ ಇಂದು ನನ್ನ ಸಾಧನೆಗಳನ್ನು ನೋಡಿ ಹೆಮ್ಮೆಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಎಂಬ ಇತಿಹಾಸ ನಿರ್ಮಿಸಿದರು. 2016 ರ ರಿಯೊ ಗೇಮ್ಸ್‌ನಲ್ಲಿ, ವಾಲ್ಟ್ ಈವೆಂಟ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಲ್ಲದೆ, ಕೂದಲೆಳೆಯ ಅಂತರದಲ್ಲಿ ಪದಕ ವೇದಿಕೆಯನ್ನು ತಪ್ಪಿಸಿಕೊಂಡಿದ್ದರು. ಅದರಲ್ಲೂ ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಕಷ್ಟಕರವಾದ ಪ್ರೊಡುನೋವಾ ವಾಲ್ಟ್ ವ್ಯಾಪಕ ಮೆಚ್ಚಿಗೆಯನ್ನು ಗಳಿಸಿತ್ತು.
ಆಕೆಯ ಒಲಿಂಪಿಕ್ ಸಾಧನೆಯನ್ನು ಹೊರತಾಗಿ, ಕರ್ಮಾಕರ್ ಅವರ ವೃತ್ತಿಜೀವನದಲ್ಲಿ ಹಲವಾರು ಮೀಲಿಗಲ್ಲುಗಳಿವೆ. 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದರು. 2018 ರಲ್ಲಿ ನಡೆದ FIG ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಜಯಗಳಿಸುವ ಮೂಲಕ ಜಾಗತಿಕ ಜಿಮ್ನಾಸ್ಟಿಕ್ಸ್ ಈವೆಂಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.